ಜಿಲ್ಲೆ

ರಾತ್ರೋರಾತ್ರಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲೇ ವಿಚಿತ್ರವೊಂದು ನಡೆದಿದೆ. ನಗರದ ಕೃಷಿ ವಿಶ್ವವಿದ್ಯಾಲಯದ ಜಮೀನಿನಲ್ಲಿ ರಾತ್ರೋರಾತ್ರಿ ಅಯ್ಯಪ್ಪ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಗೊಳಿಸಲಾಗಿದೆ. ಎದುರಿಗೆ ನಾಗರ ಮೂರ್ತಿ, ಚಿಕ್ಕ ಗಣೇಶನ ವಿಗ್ರಹ ಇಡಲಾಗಿದೆ. ಶಾಸ್ತ್ರೋಕ್ತವಾಗಿ ಉತ್ತರಾಭಿಮುಖವಾಗಿ ಸ್ವಾಮಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದರೆ, ಎದುರುಗಡೆ ನಾಗರಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಎರಡೂ ಮೂರ್ತಿಗಳಿಗೆ ಪೂಜೆ ಮಾಡಲಾಗಿದೆ. ಇಟ್ಟಿಗೆಯಿಂದ ಕಟ್ಟೆ ಕಟ್ಟಿ ಅದರ ಮೇಲೆ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿ ಮೂರ್ತಿಗೆ ಕಪ್ಪು ಬಟ್ಟೆ ಕೂಡ ಹಾಕಲಾಗಿದೆ. ಈ ರೀತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ 2- 3 ದಿನಗಳಾಗಿವೆ ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಜನರ ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ವಾಮಿ ಅಯ್ಯಪ್ಪ ಮಾಲಾಧಾರಿಗಳು ಸ್ಥಳಕ್ಕೆ ದೌಡಾಯಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಶ್ವವಿದ್ಯಾಲಯದ ಜಾಗದಲ್ಲಿ ಯಾರು, ಯಾವ ಉದ್ದೇಶಕ್ಕಾಗಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೋ ಗೊತ್ತಿಲ್ಲ. ಇದು ಒಳ್ಳೆಯ ಕಾರ್ಯ. ಅಯ್ಯಪ್ಪನ ದೇವಸ್ಥಾನ ನಿರ್ಮಿಸಿದರೆ ಚೆನ್ನಾಗಿರುತ್ತದೆ. ಇದನ್ನು ತೆರವುಗೊಳಿಸಬಾರದು ಎಂದು ಸ್ಥಳೀಯರು ಒತ್ತಾಯಿಸಿದರು.

ವಿಷಯ ತಿಳಿದ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎ. ಪಾಟೀಲ, ಸಭೆ ನಡೆಸಿ ತೆರವುಗೊಳಿಸುವ ನಿರ್ಧಾರ ಕೈಗೊಂಡರು. ಸ್ಥಳಕ್ಕೆ ಜೆಸಿಬಿ ಕಳುಹಿಸಿ ಮೂರ್ತಿಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾದರು. ಆದರೆ, ಅಲ್ಲಿದ್ದ ಅಯ್ಯಪ್ಪಮಾಲಾಧಾರಿಗಳು ಮತ್ತು ಸ್ಥಳೀಯರು ಜೆಸಿಬಿಯನ್ನು ವಾಪಸ್ ಕಳುಹಿಸಿದ್ದಾರೆ. ಸದ್ಯ ಮೂರ್ತಿಗಳು ಸ್ಥಳದಲ್ಲೇ ಇದ್ದು, ಕೃಷಿ ವಿಶ್ವವಿದ್ಯಾಲಯ ಆಡಳಿತಾಽಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.