ಜಿಲ್ಲೆ

ರಾತ್ರಿಯಿದ್ದ ಬೆಳೆ ಬೆಳಗ್ಗೆ ನೆಲ ಕಚ್ಚಿತ್ತು..!

ಚಾಮರಾಜನಗರ: ಎರಡು ಎಕರೆ ಜಮೀನಿನಲ್ಲಿ ಬಾಳೆ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿರುವ ಖುಷಿಯಲ್ಲಿ ರಾತ್ರಿ ಮನೆಗೆ ತೆರೆಳಿದ್ದ ರೈತನಿಗೆ ಬೆಳಗ್ಗೆ ಆಘಾತ ಕಾದಿತ್ತು. ರಾತ್ರಿ ಆಕಾಶ ನೋಡುತ್ತಿದ್ದ 2400 ಬಾಳೆ ಬೆಳೆಯಲ್ಲಿ 1100 ಗಿಡಗಳು ಬೆಳೆಗಾಗುವಷ್ಟರಲ್ಲಿ ನೆಲಕಚ್ಚಿದ್ದವು.

ತಾಲೂಕಿನ ಜ್ಯೋತಿಗೌಡನಪುರದ ಜಮೀನಿನಲ್ಲಿ ರೈತ ವೀರಭದ್ರಪ್ಪ ಬೆಳೆದಿದ್ದ ಬೆಳೆಯನ್ನು ಮಂಗಳವಾರ ರಾತ್ರಿ ಕಾಡುಹಂದಿಗಳು ನಾಶ ಮಾಡಿವೆ. 6 ತಿಂಗಳ ಬಾಳೆ ಗಿಡಗಳಲ್ಲಿ ಎತ್ತರಕ್ಕೆ ಬೆಳೆದ ಗಿಡಗಳೇ ಹೆಚ್ಚು ಹಾನಿಯಾಗಿವೆ.

ಕರೊನಾ ಹಿನ್ನೆಲೆ ಪ್ರಸ್ತುತ ಬಾಳೆ ಬೆಳೆ ಬೆಳೆದಿರುವ ರೈತರು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಇದನ್ನು ನೆನೆದು ತಮ್ಮ ಬೆಳೆ ಲ ನೀಡಲು ಇನ್ನೂ ಸಮಯವಿದೆ. ಅಷ್ಟರಲ್ಲಿ ಕರೊನಾ ತಗ್ಗಲಿದೆ ಎನ್ನುವ ವಿಶ್ವಾಸದ ಲೆಕ್ಕಾಚಾರದಲ್ಲಿದ್ದ ರೈತ ವೀರಭದ್ರಪ್ಪ ಅವರಿಗೆ ಕಾಡುಹಂದಿಗಳ ಹಾವಳಿ ಲಕ್ಷಾಂತರ ರೂ. ಬೆಳೆ ನಷ್ಟ ಉಂಟು ಮಾಡಿದೆ.

ಕಾಡುಪ್ರಾಣಿಗಳು ಬೆಳೆ ಹಾನಿ ಮಾಡುವುದಕ್ಕೆ ಕಡಿವಾಣ ಹಾಕಲು ಜಮೀನಿನ ಸುತ್ತ ಸೋಲಾರ್ ಬೇಲಿ ಹಾಕಿಸಲು ಹಣದ ಅಭಾವ ಎದುರಾಗಿತ್ತು. ದಿನನಿತ್ಯವೂ ಬೆಳೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ. ರಾತ್ರಿ ತಡವಾಗಿ ಮನೆಗೆ ತೆರಳಿದೆ. ಬೆಳಗ್ಗೆ ಪಕ್ಕದ ಜಮೀನಿನ ರೈತ ಫೋನ್ ಮಾಡಿ ನಿನ್ನ ಜಮೀನಿನಲ್ಲಿ ಬಾಳೆ ಕಾಣುತ್ತಿಲ್ಲ ಎಂದು ತಿಳಿಸಿದ. ತಕ್ಷಣ ಸ್ಥಳಕ್ಕೆ ಬಂದು ನೋಡಿ ಕಂಗಾಲಾದೆ ಎಂದು ರೈತ ವೀರಭದ್ರಪ್ಪ ಅಳಲು ತೋಡಿಕೊಂಡರು. ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.