ಹನೂರು: ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಇಡೀ ರಾತ್ರಿ ಜೋರು ಮಳೆಯಾದ ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವಿವು ಹೆಚ್ಚಿತ್ತು. ಪರಿಣಾಮ ಕಿರು ಸೇತುವೆಗಳ ಮೇಲೆ ಯಥೇಚ್ಛವಾದ ನೀರು ಹರಿದಿದ್ದರಿಂದ ಸೋಮವಾರ ಜನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ತಾಲೂಕು ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯಲ್ಲಿ ಪ್ರಾರಂಭವಾದ ಮಳೆ ಬೆಳಗಿನ ಜಾವ 5ರ ತನಕ ಎಡಬಿಡದೆ ಸುರಿಯಿತು. ಈ ಭಾಗದ ಬಿಆರ್‌ಟಿ ವನ್ಯಜೀವಿ ಧಾಮದಲ್ಲೂ ಜೋರು ಮಳೆಯಾಯಿತು. ಇದರಿಂದ ಹಳ್ಳಕೊಳ್ಳಗಳಲ್ಲಿ ನೀರು ಹರಿದರೆ, ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹಣಾ ಪ್ರಮಾಣ ಹೆಚ್ಚಿತ್ತು.
ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಭರ್ತಿಯಾಗಿದ್ದ ಮೋಡಹಳ್ಳಿ ಸಮೀಪದ ಗುಂಡಾಲ್ ಜಲಾಶಯ, ಉದನೂರು ಬಳಿಯ ಹುಬ್ಬೆಹುಣಸೆ, ಅಜ್ಜೀಪುರದ ಉಡುತೊರೆ, ಹೂಗ್ಯಂ ಕೀರೆಪಾತಿ ಜಲಾಶಯ ಹಾಗೂ ಇನ್ನಿತರ ಜಲಾಶಯಗಳಿಗೆ ನೀರು ಹರಿದು ಕೋಡಿ ಬಿದ್ದಿತು. ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆಲ ರೈತರಲ್ಲಿ ಖುಷಿ ವ್ಯಕ್ತವಾದರೆ ಇದೀಗ ಬಿತ್ತನೆ ಕಾರ್ಯ ಮುಗಿಸಿದ್ದ ರೈತರಲ್ಲಿ ಆತಂಕ ಮನೆ ಮಾಡಿತು.
ಸಂಚಾರ ಬಂದ್:
ಈ ಭಾಗದಲ್ಲಿ ಜೋರು ಮಳೆಯಾದ ಹಿನ್ನೆಲೆಯಲ್ಲಿ ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿ ಹಳ್ಳಕೊಳ್ಳಗಳಲ್ಲಿ ನೀರು ಹರಿಯಿತು. ಇದರಿಂದ ಪಟ್ಟಣದ ದೇವಾಂಗಪೇಟೆ ಬಡಾವಣೆ ಮೂಲಕ ಹಾದು ಹೋಗಿರುವ ತಟ್ಟೆಹಳ್ಳ ಮೈದುಂಬಿ ಹರಿಯಿತು. ಪರಿಣಾಮ ಆಂಜನೇಯಸ್ವಾಮಿ ದೇಗುಲದ ಸಮೀಪವಿರುವ ಕಿರು ಸೇತುವೆಯ ಮೇಲೆ ನೀರು ರಭಸದಿಂದ ಹರಿಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೇತುವೆಯ ಎರಡೂ ಕಡೆ ಬ್ಯಾರಿಕೇಡ್‌ಗಳನ್ನು ಹಾಕಿ ಈ ಮಾರ್ಗದಲ್ಲಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದ ಈ ಬಡಾವಣೆಯ ನಿವಾಸಿಗಳು ಲೊಕ್ಕನಹಳ್ಳಿ ಹಾಗೂ ಮ.ಬೆಟ್ಟ ಮುಖ್ಯ ರಸ್ತೆಯ ಮೂಲಕ ಸಂಚರಿಸಿದರು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚಿನ ತೊಂದರೆ ಅನುಭವಿಸಿದರು. ಈ ವೇಳೆ ಕಿರುಸೇತುವೆಯನ್ನು ಮೇಲ್ಮಟ್ಟದ ಸೇತುವೆಯಾಗಿ ನಿರ್ಮಿಸುವಂತೆ ನಿವಾಸಿಗಳಿಂದ ಒತ್ತಾಯ ಕೇಳಿಬಂತು.
ಬದಲಿ ಮಾರ್ಗದಲ್ಲಿ ಸಂಚಾರ:
ಪಟ್ಟಣದ ಮೂಲಕ ಲೊಕ್ಕನಹಳ್ಳಿ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ತಟ್ಟೆಹಳ್ಳಕ್ಕೆ ಅಡ್ಡಲಾಗಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಸಂಚಾರಕ್ಕಾಗಿ ಸಮೀಪದಲ್ಲಿಯೇ ಪೈಪ್‌ಗಳನ್ನು (ತೂಬು) ಅಳವಡಿಸಿ ತಾತ್ಕಾಲಿಕವಾಗಿ ಮಣ್ಣಿನ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ರಾತ್ರಿ ಜೋರು ಮಳೆಯಾದ ಕಾರಣ ಹಳ್ಳದಲ್ಲಿ ಹೆಚ್ಚಿನ ನೀರು ಹಿರಿದು ಬಂತು. ಪರಿಣಾಮ ಮಣ್ಣಿನ ಕಿರು ಸೇತುವೆಯ ಮೇಲೆ ನೀರು ಹರಿಯಿತು. ಇದರಿಂದ ಈ ಮಾರ್ಗದ ವಾಹನಗಳು ಉದ್ದನೂರು, ಬೆಳತ್ತೂರು ಮಾರ್ಗವಾಗಿ ಸಂಚರಿಸಿದವು. ಕೆಲ ಬೈಕ್ ಸವಾರರು ಜೀವಭಯವನ್ನು ಲೆಕ್ಕಿಸದೆ ಹರಸಾಹಸಪಟ್ಟು ಹಳ್ಳವನ್ನು ದಾಟಿದರೆ ರೈತರು ಜಾನುವಾರುಗಳನ್ನು ಕರೆದೊಯ್ಯಲು ತುಂಬಾ ಶ್ರಮಪಟ್ಟರು. ಹಾಗಾಗಿ ಸಾರ್ವಜನಿಕರು ತೊಂದರೆ ಪಡುವಂತಾಯಿತು.
ರೈತರಲ್ಲಿ ಆತಂಕ: ಹನೂರು ಭಾಗದಲ್ಲಿ ಈಗಾಗಲೇ ಕಳೆದ ಒಂದು ತಿಂಗಳ ಹಿಂದೆ ಬಿತ್ತನೆ ಮಾಡಲಾಗಿರುವ ಬಹುತೇಕ ಜಮೀನುಗಳಲ್ಲಿ ಪೈರುಗಳು ಬಂದಿದೆ. ಈ ಮಳೆ ಕೃಷಿಗೆ ಹರ್ಷದಾಯಕವಾಗಿದ್ದು, ರೈತರಲ್ಲಿ ಖುಷಿ ಮನೆ ಮಾಡಿದ್ದರೆ ಕಳೆದ ನಾಲ್ಕೈದು ದಿನದ ಹಿಂದೆ ರಾಗಿ, ಮುಸುಕಿನ ಜೋಳವನ್ನು ಬಿತ್ತನೆ ಮಾಡಿರುವ ರೈತರಲ್ಲಿ ಆತಂಕ ಉಂಟು ಮಾಡಿದೆ.