ಶಿವಮೊಗ್ಗ: 994 ಕೋಟಿ ರೂ. ವೆಚ್ಚದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದರು.
ಬೆಳಗಾವಿ ಕಚೇರಿಯಿಂದ ಶನಿವಾರ ವರ್ಚುವಲ್ ವಿಡಿಯೋ ಮೂಲಕ ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದ ಎರಡು ಲಿಫ್ಟ್ ಹಾಗೂ ಅರಸಾಳು ನಿಲ್ದಾಣದ ಮಾಲ್ಗುಡಿ ಮ್ಯೂಸಿಯಂ ಮತ್ತು ವಿಸ್ತರಣೆಗೊಂಡ ರೈಲ್ವೆ ಫ್ಲಾಟ್ಫಾಮ್ರ್ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ ಎಂದರು.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ಹಾಗೂ ದಾವಣಗೆರೆ-ಬೆಂಗಳೂರು ನಡುವೆ ಡಬ್ಲಿಂಗ್ ಯೋಜನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಉಚಿತವಾಗಿ ಭೂಮಿ ಮತ್ತು ಶೇ.50ರಷ್ಟು ಯೋಜನಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯಕ್ಕೆ ರೈಲ್ವೆ ಯೋಜನೆಗಳು ಹೆಚ್ಚು ಬರುವುದರಿಂದ ಕೈಗಾರಿಕೆಗಳ ಬೆಳವಣಿಗೆಯಾಗಲಿದೆ. ರಾಜ್ಯ ಸರ್ಕಾರ ತುರ್ತಾಗಿ ಅಗತ್ಯವಿರುವ ಕಡೆ ಭೂಸ್ವಾಧೀನ ಮಾಡಿಕೊಟ್ಟರೆ ಹೊಸ ರೈಲ್ವೆ ಯೋಜನೆ ಅನುಷ್ಠಾನಕ್ಕೆ ನೆರವಾಗಲಿದೆ.
ರೈಲ್ವೆ ಭಾರತೀಯರ ಜೀವ ನಾಡಿಯಾಗಿದ್ದು ಲಾಕ್ಡೌನ್ ಸಂದರ್ಭದಲ್ಲಿ ಮೂರೇ ತಿಂಗಳಲ್ಲಿ 67 ಲಕ್ಷ ಕಾರ್ವಿುಕರು ಹಾಗೂ ಜನರನ್ನು ಅವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಕರೊನಾ ಸಂಕಷ್ಟಕ್ದಲ್ಲೂ ಗೊಬ್ಬರ ಮತ್ತು ಔಷಧವನ್ನು ಸಮರ್ಪಕವಾಗಿ ಸಾಗಣೆ ಮಾಡುವ ಮೂಲಕ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ ಎಂದರು.
ಸಿಎಂ ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಹೊಸ ಹೊಸ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೆರಡು ತಿಂಗಳಲ್ಲಿ ಭೂಸ್ವಾಧೀನ ಪೂರ್ಣ: ಇನ್ನೆರಡು ತಿಂಗಳಲ್ಲಿ 245 ಕೋಟಿ ವೆಚ್ಚದಲ್ಲಿ ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.
ಪೆಸಿಟ್ ಕಾಲೇಜಿನಲ್ಲಿ ವರ್ಚುವಲ್ ವಿಡಿಯೋ ಮೂಲಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ 49 ಹಳ್ಳಿಗಳಲ್ಲಿ 1,365 ಎಕರೆ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ-ಹರಿಹರ ರೈಲು ಮಾರ್ಗ, ಬಿರೂರು-ಶಿವಮೊಗ್ಗ ಡಬ್ಲಿಂಗ್, ತಾಳಗುಪ್ಪ-ಸಿದ್ದಾಪುರ ಹಾಗೂ ಶಿವಮೊಗ್ಗದಿಂದ ಶೃಂಗೇರಿ-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಎರಡು ಲಿಫ್ಟ್ ನಿರ್ವಿುಸಿದ್ದು ಹಿರಿಯ ನಾಗರಿಕರಿಗೆ ಹಾಗೂ ಅಶಕ್ತರಿಗೆ ಅನುಕೂಲವಾಗಲಿದೆ. ಈ ನಡುವೆ ಅನುದಾನದ ಕೊರತೆಯಿಂದ ಕುಂಸಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೈರುತ್ಯ ರೈಲ್ವೆ ಜಿಎಂ ಅಜಯ್ಸಿಂಗ್, ಜಿಆರ್ಎಂ ಅಪರ್ಣಾ ಗಾರ್ಗ್ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎರಡು ತಿಂಗಳಲ್ಲಿ ಪೂರ್ಣ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿವಮೊಗ್ಗದ ನೂರು ಅಡಿ ವರ್ತಲ ರಸ್ತೆ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 100 ಕೋಟಿ ರೂ. ವೆಚ್ಚದಲ್ಲಿ ವಿದ್ಯಾನಗರ, ಭದ್ರಾವತಿಯ ಜೆಡಿ ಕಟ್ಟೆ, ಕಾಶಿಪುರ ಮತ್ತು ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ವಣಕ್ಕೆ ಅನುಮೋದನೆ ದೊರೆತಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ಶಂಕರ್ನಾಗ್ ನೆನಪಿಗೆ ‘ಮಾಲ್ಗುಡಿ ಮ್ಯೂಸಿಯಂ’: ನ್ಯಾರೋಗೇಜ್ ಕಾಲದ ಅರಸಾಳು ಹಳೆಯ ರೈಲ್ವೆ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ. ಶಂಕರನಾಗ್ ನಿರ್ವಿುಸಿದ ‘ಮಾಲ್ಗುಡಿ ಡೇಸ್’ ಧಾರವಾಹಿಯಲ್ಲಿ ಇದೇ ರೈಲ್ವೆ ನಿಲ್ದಾಣ ಬಳಸಿಕೊಂಡಿದ್ದರು. ಈ ನೆನಪಿಗಾಗಿ 25 ಲಕ್ಷ ರೂ. ವೆಚ್ಚದಲ್ಲಿ ಹಳೆ ನಿಲ್ದಾಣವನ್ನು ‘ಮಾಲ್ಗುಡಿ ಮ್ಯೂಸಿಯಂ’ ಆಗಿ ಪರಿವರ್ತಿಸಲಾಗಿದೆ. ಇಲ್ಲಿನ ಫ್ಲಾಟ್ಫಾಮ್ರ್ ವಿಸ್ತರಿಸಿದ್ದು, 28 ಕೋಚ್ ರೈಲುಗಳು ನಿಲ್ಲುವ ಸೌಲಭ್ಯ ಕಲ್ಪಿಸಲಾಗಿದೆ. ಇದೊಂದು ಪ್ರವಾಸಿ ತಾಣವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗಲಿದೆ ಎಂದು ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಕೋಚಿಂಗ್ ಡಿಪೋ ಅವಶ್ಯಕ: ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಕೋಚಿಂಗ್ ಡಿಪೋಗಳ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಭವಿಷ್ಯದ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಕೋಚಿಂಗ್ ಡಿಪೋ ತೆರೆಯುವ ಅವಶ್ಯಕತೆ ಇದೆ. ಇಲ್ಲಿಂದ ಹೆಚ್ಚುವರಿ ರೈಲು ಸೇವೆ ಆರಂಭಿಸಲು ಸಹಕಾರಿ ಆಗಲಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬಜೆಟ್ನಲ್ಲಿ ಶಿವಮೊಗ್ಗಕ್ಕೆ ಮಂಜೂರು ಮಾಡಿಸಿದ್ದು ರೈಲ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತ್ವರಿತವಾಗಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಬೇಕು. ಇದಕ್ಕಾಗಿ ಎರಡು ಪಿಟ್ ಲೈನ್, 4 ಸ್ಟ್ಯಾಬ್ಲಿಂಗ್ ಲೈನ್ ಹಾಗೂ 2 ಸಿಕ್ ಲೈನ್ಗಳನ್ನು ಹೊಂದಬೇಕಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಟ್ವೀಟ್ ಮಾಡಿದ ಕೇಂದ್ರ ಸಚಿವ: ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮಾಲ್ಗುಡಿ ಡೇಸ್ನ ನೆನಪಿಗಾಗಿ ನಿರ್ವಿುಸಿ ಮಾಲ್ಗುಡಿ ಮ್ಯೂಸಿಯಂನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ವರ್ಚುವಲ್ ವಿಡಿಯೋ ಮುಖಾಂತರ ಉದ್ಘಾಟಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಹಳೇ ನೆನಪನ್ನು ಮರುಕಳಿಸುವಂತೆ ಮಾಡಿದ್ದೀರಿ ಎಂದಿದ್ದಾರೆ.