ಜಿಲ್ಲೆ

ರಾಣೆಬೆನ್ನೂರ ಎಪಿಎಂಸಿ ಕಾಂಗ್ರೆಸ್ ಮಡಿಲಿಗೆ

ರಾಣೆಬೆನ್ನೂರ: ಇಲ್ಲಿಯ ಎಪಿಎಂಸಿಯ ಕೊನೆಯ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಸೋಮವಾರ ಹಮ್ಮಿಕೊಂಡ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಸವಣೂರ 10 ಮತ ಪಡೆದು ಅಧ್ಯಕ್ಷರಾಗಿ ಹಾಗೂ ಸುರೇಶ ಬೀರಾಳ 9 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

17 ಸದಸ್ಯರ ಬಲ ಹೊಂದಿರುವ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬಸವರಾಜ ಹುಲ್ಲತ್ತಿ ಹಾಗೂ ಕಾಂಗ್ರೆಸ್​ನಿಂದ ಬಸವರಾಜ ಸವಣೂರ ಸ್ಪರ್ಧೆ ಮಾಡಿದ್ದರು. ಮತದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ 10 ಮತ, ಬಿಜೆಪಿ ಅಭ್ಯರ್ಥಿ 7 ಮತ ಪಡೆದುಕೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರಾಜೇಂದ್ರ ಬಸೇನಾಯ್ಕರ ಹಾಗೂ ಕಾಂಗ್ರೆಸ್​ನಿಂದ ಸುರೇಶ ಬೀರಾಳ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿ 8 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ 9 ಮತ ಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಬಸನಗೌಡ ಕೋಟೂರು ತಿಳಿಸಿದರು.

ಬಿಜೆಪಿ ಬೆಂಬಲಿತ ಸದಸ್ಯನ ಮತ ಕಾಂಗ್ರೆಸ್​ಗೆ: ಎಪಿಎಂಸಿಯಲ್ಲಿ 9 ಕಾಂಗ್ರೆಸ್ ಬೆಂಬಲಿತ ಹಾಗೂ 8 ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ಸವಣೂರ ಅವರಿಗೆ ಬಿಜೆಪಿ ಬೆಂಬಲಿತ ಸದಸ್ಯನ ಒಂದು ಮತ ಸೇರಿ ಒಟ್ಟು 10 ಮತಗಳು ಬಂದಿವೆ. ಚುನಾವಣೆಗೂ ಮುನ್ನ ಬಿಜೆಪಿಯ ಕಾಂಗ್ರೆಸ್​ನ ಒಂದು ಮತ ಸೆಳೆಯಬಹುದು ಎನ್ನಲಾಗಿತ್ತು. ಆದರೆ, ಚುನಾವಣೆ ಬಳಿಕ ಬಿಜೆಪಿಯ ಒಂದು ಮತ ಕಾಂಗ್ರೆಸ್​ಗೆ ಬಂದಿರುವುದು ವಿಚಿತ್ರವೆನಿಸಿತು.