ಮಳವಳ್ಳಿ ಪಟ್ಟಣದ ನ್ಯೂ ಲೈಫ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು ಉದ್ಘಾಟಿಸಿದರು. ಬಿಇಒ ಚಿಕ್ಕಸ್ವಾಮಿ, ರವಿಕುಮಾರ್ ಚಾಮಲಾಪುರ, ಚೇತನ್ ಕುಮಾರ್, ಕರುಣಾಕವಿತ, ಗೋವಿಂದ್, ಸಿದ್ದೇಗೌಡ ಇದ್ದರು.  
ಜಿಲ್ಲೆ

ರಾಜ್ಯೋತ್ಸವದ ಹಿಂದಿದೆ ಮಹನೀಯರ ಹೋರಾಟದ ಶ್ರಮ

ಮಳವಳ್ಳಿ: ಪ್ರಸ್ತುತ ನಾವು ಹೆಮ್ಮೆಯಿಂದ ನಾಡಿನ ಉದ್ದಗಲಕ್ಕೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದರ ಹಿಂದೆ ಹಲವಾರು ಮಹನೀಯ ಹೋರಾಟದ ಶ್ರಮವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ತಿಳಿಸಿದರು.

ಪಟ್ಟಣದ ನ್ಯೂ ಲೈಫ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ಸ್ಥಾಪನೆಗಾಗಿ ಸಾಹಿತಿಗಳು, ಚಿಂತಕರು, ಕನ್ನಡಾಭಿಮಾನದ ದಿಗ್ಗಜರು ಬೀದಿಗಿಳಿದು ಹೋರಾಟ ಮಾಡಿದ್ದಾರೆಂದು ಸ್ಮರಿಸಿದರು.

ರಾಜ್ಯ ಸರ್ಕಾರವೂ ತನ್ನ ಆಡಳಿತ ಕಡತಗಳಲ್ಲಿ ಕನ್ನಡ ಭಾಷೆ ಬಳಕೆಗೆ ಕ್ರಮ ವಹಿಸಿರುವುದರಿಂದ ನಾಡಿನ ಜನರಲ್ಲಿ ಭಾಷಾಭಿಮಾನ ಹೆಚ್ಚಿಸಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ನೆಲೆಸಿರುವ ಮಾತೃ ಭಾಷಿಕರು ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡು ಅಭಿಮಾನ ಮೆರೆಯುತ್ತಿರುವುದು ನಮ್ಮ ಭಾಷೆಗೆ ಇರುವ ಹಿರಿಮೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ವಿಸ್ತಾರವಾಗಿದ್ದ ಕರುನಾಡು ಕಿರಿದಾಗುತ್ತಿದ್ದು, ಇದನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಗಡಿಭಾಗಗಳಲ್ಲಿ ನೆರೆ ರಾಜ್ಯಗಳಿಗೆ ಸೇರಿಕೊಂಡಿರುವ ನೂರಾರು ಗ್ರಾಮಗಳಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಅವುಗಳನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ವಹಿಸುತ್ತಿದ್ದು, ಆದರೂ ಕೆಲವರ ತಕಾರುರು ನಿಂತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.