ಕಲಬುರಗಿ: ನಾಡು-ನುಡಿ, ಭಾಷೆ ಬಗ್ಗೆ ಅಭಿಮಾನ ಬೆಳೆಸುವಂಥ ವೈವಿಧ್ಯಮಯ ಕಾರ್ಯಕ್ರಮ ನಿರಂತರ ಆಯೋಜಿಸಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನ ಮತ್ತು ವಿಶೇಷ ಪ್ರಯೋಗದೊಂದಿಗೆ ಇಡೀ ನವೆಂಬರ್ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ಅ.೩೦ರಂದು ಬೆಳಗ್ಗೆ ೧೦.೧೫ಕ್ಕೆ ಜಗತ್ ವೃತ್ತದಿಂದ ಕನ್ನಡ ಭವನವರೆಗೆ ಹಮ್ಮಿಕೊಂಡಿರುವ ಕನ್ನಡ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಲಿದ್ದು, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ. ಇತರರು ಭಾಗವಹಿಸಲಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.೩ರಂದು ಬೆಳಗ್ಗೆ ೧೦.೪೫ಕ್ಕೆ ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರದ ೧೬ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪುರಸ್ಕಾರವನ್ನು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಢಾಕಪ್ಪ ಪ್ರದಾನ ಮಾಡುವರು. ಹಿರಿಯ ಲೇಖಕಿ ಡಾ.ಇಂದುಮತಿ ಪಾಟೀಲ್ ಉಪಸ್ಥಿತರಿರುವರು. ೧೨ರಂದು ಬೆಳಗ್ಗೆ ೧೦.೪೫ಕ್ಕೆ ಎಸ್.ಎಸ್. ತೆಗನೂರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಕುರಿತ ವಿಚಾರಗೋಷ್ಠಿಯನ್ನು ಮೇಯರ್ ಯಲ್ಲಪ್ಪ ನಾಯ್ಕೋಡಿ ಉದ್ಘಾಟಿಸುವರು. ಚಿಂತಕ ಪ್ರೊ.ಸಂಜಯ ಮಾಕಲ್ ವಿಚಾರ ಮಂಡಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಜ್ಯೋತಿ ತೆಗನೂರ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
೧೬ರಂದು ಸಂಜೆ ೫.೩೦ಕ್ಕೆ ಕನ್ನಡ ಭವನದ ಸಾಹಿತ್ಯ ಮಂಟಪದಲ್ಲಿ ಹಾಸ್ಯ ಕಲಾವಿದÀ ಗುಂಡಣ್ಣ ಡಿಗ್ಗಿ, ಶರಣು ದೇಸಾಯಿ, ಜ್ಯೂ.ರಾಜಕುಮಾರ್ ಖ್ಯಾತಿಯ ಹೇಮಂತ ಮಾಲಗತ್ತಿ, ಹಣಮಂತ ಶೇರಿ ಅವರಿಂದ ರಾಜ್ಯೋತ್ಸವಕ್ಕೆ ಹಾಸ್ಯದ ಹಬ್ಬ ಎಂಬ ನಕ್ಕಾಂವ ಗೆದ್ದಾಂವ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದು, ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ ಉದ್ಘಾಟಿಸುವರು. ೨೦ರಂದು ಬೆಳಗ್ಗೆ ೧೦.೪೫ಕ್ಕೆ ಕನ್ನಡ ಭವನದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ಕೆಎಎಸ್ ಅಧಿಕಾರಿ ಆಶಪ್ಪ ಪಿ. ಉದ್ಘಾಟಿಸುವರು.
೨೬ರ ಬೆಳಗ್ಗೆ ೧೦.೪೫ಕ್ಕೆ ಮಕ್ಕಳೋತ್ಸವ ಎಂಬ ಚಿಣ್ಣರ ಸಂಭ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆ ಮಕ್ಕಳು ಭಾಗವಹಿಸಲಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಉದ್ಘಾಟಿಸುವರು. ೨೯ರ ಬೆಳಗ್ಗೆ ೧೦.೪೫ಕ್ಕೆ ಕನ್ನಡ ಭವನದ ಕಲಾ ಸೌಧದಲ್ಲಿ ಒಂದು ವಾರದ ಮಹಿಳಾ ಚಿತ್ರಕಲಾ ಪ್ರದರ್ಶನಕ್ಕೆ ಶಾಸಕಿ ಕನೀಜ್ ಫಾತಿಮಾ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿರುವರು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ರಮೇಶ ಬಡಿಗೇರ, ಡಾ.ರೆಹಮಾನ್ ಪಟೇಲ್ ಇತರರಿದ್ದರು.