ಶನಿವಾರಸಂತೆ: ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕ ಮತ್ತು ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸುಪ್ರಜ ಗುರುಕುಲ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಘಟಕದ ಸದಸ್ಯ ಸುರೇಶ್ ಮೊಗೆರಾ ಜಾನಪದ ಗಾಯನ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷೆ ಹಾಗೂ ಸುಪ್ರಜ ಗುರುಕುಲ ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕನ್ನಡ, ಭಾಷೆ, ಸಾಹಿತ್ಯ, ಸಂಸ್ಕೃತಿ, ನಾಡು, ಮುಂತಾದ ಕನ್ನಡದ ಸೊಗಡುಗಳ ಬಗ್ಗೆ ಅರಿತುಕೊಳ್ಳುವ ಅಗತ್ಯ ಇದೆ. ಈ ಉದ್ದೇಶದಿಂದ ಜಾನಪದ ಪರಿಷತ್ ಮತ್ತು ಸುಪ್ರಜ ಗುರುಕುಲ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಘಟಕದ ಗೌರವಾಧ್ಯಕ್ಷೆ ನಯನತಾರಾ ಪ್ರಕಾಶ್ ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್, ಘಟಕದ ಉಪಾಧ್ಯಕ್ಷ ಎ.ಎನ್.ಹರೀಶ್, ಘಟಕದ ಸದಸ್ಯರಾದ ದಿನೇಶ್ ಮಾಲಂಬಿ, ಸುರೇಶ್ ಮೊಗೆರ ಹಾಜರಿದ್ದರು. ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆಗಳಿಂದ 4 ತಂಡಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.