ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ನಮ್ಮಲ್ಲಿ ರೂಢಿಯಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಡಾ.ಸಿ.ಕೆ.ಸುಬ್ಬರಾಯ ಆಶಯ ವ್ಯಕ್ತಪಡಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ `ನಮ್ಮ ನಾಡು-ನಮ್ಮ ಹಾಡು ಕಾರ್ಯಕ್ರಮದಡಿ ಆಯೋಜಿಸಿದ್ದ ನಾಡಿನ ಖ್ಯಾತ ಕವಿಗಳ ಕಾವ್ಯ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಬಗ್ಗೆ ನಮ್ಮಲ್ಲಿ ಅಭಿಮಾನವಿರಬೇಕು. ಹಾಗೆಯೇ ನಮ್ಮ ಸಂಸ್ಕೃತಿ, ನಾಡು-ನುಡಿಯ ಬಗ್ಗೆ ಹೆಮ್ಮೆಪಡಬೇಕು. ಕಳೆದ ೨೦ ವರ್ಷಗಳ ಹಿಂದೆ ಅನೇಕ ತಂದೆ-ತಾಯಿಯರಲ್ಲಿ ತಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕೆಂಬ ಆಕಾಂಕ್ಷೆ ಇದ್ದರೂ ಅವರಿಗೆ ಅವಕಾಶವೇ ಇರಲಿಲ್ಲ. ಆದರೆ ಇಂದು ಎಂ.ಎಸ್.ಸುಧೀರ್ ಸೇರಿದಂತೆ ಹಲವರು ಆ ಕೊರತೆಯನ್ನು ನೀಗಿಸಿದ್ದಾರೆ. ಸಂಗೀತ ಯುವ ಪೀಳಿಗೆಗೆ ಅತೀ ಮುಖ್ಯ ಎಂದು ಹೇಳಿದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇದೇ ಪ್ರಪ್ರಥಮ ಬಾರಿಗೆ ಕೊಡ ಮಾಡಿರುವ ಪೂರ್ವಿ ಕನ್ನಡ ಸಿರಿ ಪ್ರಶಸ್ತಿ ಸ್ವೀಕರಿಸಿದ ಸುಗಮ ಸಂಗೀತ ಗಂಗಾದ ಅಧ್ಯಕ್ಷ, ಮಕ್ಕಳ ತಜ್ಞ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕನ್ನಡಕ್ಕಾಗಿ ಕೈಎತ್ತು ನಾಡು ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳ ತೋರು ಅದು ಗೋವರ್ಧನ ಗಿರಿಯಾಗುತ್ತದೆ ಎಂದು ಹೇಳಿದವರು ರಾಷ್ಟçಕವಿ ಕುವೆಂಪು ಎಂದು ಹೇಳಿದರು.
ಕನ್ನಡಕ್ಕೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದ್ದು, ಪ್ರಪ್ರಥಮವಾಗಿ ಈ ಪ್ರಶಸ್ತಿ ಕುವೆಂಪು ಅವರಿಗೆ ಬಂದಿದೆ. ದೇಶದಲ್ಲಿ ೧,೬೨೩ ಭಾಷೆಗಳಿವೆ. ೪೦೦ಕ್ಕಿಂತ ಹೆಚ್ಚು ಆಡುಭಾಷೆಗಳಿವೆ. ೧೩ ರಾಷ್ಟಿçÃಯ ಭಾಷೆಗಳಿವೆ. ಜಗತ್ತಿನ ಯಾವ ದೇಶದಲ್ಲೂ ಈ ವಿಶೇಷತೆ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು ಎಂದು ಕವಿ ಬರೆಯುತ್ತಾನೆ. ಕನ್ನಡಕ್ಕೆ ಆ ಶಕ್ತಿ ಇದೆ. ಅದು ತಾಯಿ ಭಾಷೆ. ಅದು ಹೃದಯದ ಭಾಷೆ ಎಂದು ಬಣ್ಣಿಸಿದರು.
ಸಂಗೀತ ಶಿಕ್ಷಕಿ ವೀಣಾ ಅರವಿಂದ್, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ರಮೇಶ್, ಸಂಗೀತ ಶಿಕ್ಷಕರುಗಳಾದ ಸುಮಾ ಪ್ರಸಾದ್, ಪ್ರಸನ್ನಲಕ್ಷಿö್ಮÃ, ಗೀತಾ ಸತೀಶ್, ಮಾಲಿನಿ ರಮೇಶ್, ಪದ್ಮಾ ಚಂದ್ರಶೇಖರ್, ಪವಿತ್ರ ದೀಪಕ್, ನಳಿನಾ ವೆಂಕಟೇಶ್, ಪಂಕಜ ಕಶ್ಯಪ್ ಉಪಸ್ಥಿತರಿದ್ದರು.