ಬೇಲೂರು: ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಹಾಗೂ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಬೇಲೂರಿನಲ್ಲಿ ನ.1ರಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.1ರಂದು ಬೆಳಗ್ಗೆ ಹಲ್ಮಿಡಿ ಗ್ರಾಮದಿಂದ ಕನ್ನಡ ಜ್ಯೋತಿ ತರುವ ಮೂಲಕ ಕಾರ್ಯಕ್ರಮ ಮಗಿಯುವವರೆಗೂ ಎಲ್ಲ ಇಲಾಖೆ ಅಧಿಕಾರಿಗಳು ಖುದ್ದಾಗಿ ಇರಬೇಕು. ಪ್ರತಿಯೊಂದು ಅಂಗಡಿ ಮುಂಗಟ್ಟುಗಳು ಮತ್ತು ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರದೊಂದಿಗೆ ಕನ್ನಡದ ಬಾವುಟಗಳನ್ನು ಕಟ್ಟಬೇಕು. ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದರವರಿಗೆ ಸನ್ಮಾನ ಮತ್ತು ಸಮಾಜದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಅಭಿನಂದಿಸಲಾಗುವುದು. ಸ್ತಬ್ಧ ಚಿತ್ರಗಳ ಮೆರವಣಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ನಮ್ಮ ಹಬ್ಬ. ಕಾರ್ಯಕ್ರಮಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು. ಅ.24ರೊಳಗೆ ಸಾಹಿತ್ಯ, ಕಲೆ, ಕೃಷಿ, ಪತ್ರಿಕಾ ರಂಗ ಮತ್ತು ಕನ್ನಡಪರ ಹೋರಾಟಗಾರರು ತಮ್ಮ ಪೂರ್ಣ ಮಾಹಿತಿಯುಳ್ಳ ಅರ್ಜಿಯನ್ನು ತಾಲೂಕು ಕಚೇರಿಯಲ್ಲಿ ಸಲ್ಲಿಸಬಹುದು ಎಂದರು.
ಕರವೇ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪ್ರತಿ ವರ್ಷದಂತೆ ಹಲ್ಮಿಡಿ ಗ್ರಾಮದಿಂದ ಕನ್ನಡ ಜ್ಯೋತಿಯನ್ನು ಬೇಲೂರಿಗೆ ತರಲಾಗುತ್ತದೆ. 100 ಮೀಟರ್ ಕನ್ನಡ ಬಾವುಟ ಪ್ರದರ್ಶಿಸಲಾಗುವುದು. ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗಮ್ಮ, ಬಿಆರ್‌ಸಿ ಶಿವಮರಿಯಪ್ಪ, ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಜಣ್ಣ, ಕರವೇ ಅಧ್ಯಕ್ಷ ಬೋಜೇಗೌಡ, ಮುಖಂಡರಾದ ಬಿ.ಎಲ್.ಧರ್ಮೇಗೌಡ, ಬಿ.ಎಂ.ಸಂತೋಷ್, ಪವರ್ತಯ್ಯ, ರಮೇಶ್, ಮಂಜುನಾಥ ಇತರರಿದ್ದರು.