ಜಿಲ್ಲೆ

ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸಸಿ ನೀಡಿ ಗೌರವ

ಹುಬ್ಬಳ್ಳಿ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಅಶೋಕ ಶೆಟ್ಟರ್ ಹಾಗೂ ಕುಂಚ ಕಲಾವಿದ ಎಂ.ಜಿ. ವಾಚೇದಮಠ ಅವರಿಗೆ ರಾಜ್ಯೋತ್ಸವ ನಿಮಿತ್ತ ಗ್ರೋ ಗ್ರೀನ್ ಪೆಡ್ಲರ್ಸ್ ವತಿಯಿಂದ ಸಸಿ ನೀಡಿ ಗೌರವಿಸಲಾಯಿತು.

ಭಾನುವಾರ ಬೆಳಗ್ಗೆ ವಿದ್ಯಾನಗರದ ಪಾಲಿಕೆ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಶೋಕ ಶೆಟ್ಟರ್ ಮಾತನಾಡಿ, ಯುವಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಗ್ರೋ ಗ್ರೀನ್ ಪೆಡ್ಲರ್ಸ್ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಇಂಥ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗಿಯಾಗಬೇಕು ಎಂದರು.

ಎಂ.ಜಿ. ವಾಚೇದಮಠ ಮಾತನಾಡಿ, ತಮ್ಮೆಲ್ಲರ ಆಶೀರ್ವಾದದಿಂದ ಪ್ರಶಸ್ತಿ ಬಂದಿದೆ. ನಾನು ನೆಪ ಮಾತ್ರ ಎಂದರು.

ಕರೊನಾ ಸೇನಾನಿಗಳಾದ ಪೊಲೀಸ್ ಸಿಬ್ಬಂದಿಗೆ ಕನ್ನಡ ಪುಸ್ತಕ ಹಾಗೂ ಸಸಿ ನೀಡಿ ಗೌರವಿಸಲಾಯಿತು.

ಪೆಡ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ವಿದ್ಯಾನಗರ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಆನಂದ ಒನಕುದುರೆ, ಶಿವಾನಂದ ಬನ್ನಿಕೊಪ್ಪ, ನಬಿ ನಾಯಕವಾಡಿ, ಚಂದ್ರಶೇಖರ ಏರಿಮನಿ, ಚನ್ನು ದೇವಕ್ಕಿ, ಪ್ರವೀಣ ಪಾಟೀಲ, ರಾಜು ರಾಜೋಳಿ, ಕೃತಿಕ ಕಠಿಗಾರ, ಕಿರಣ ಶೆಟ್ಟಿ, ಅಭಿಷೇಕ ಹೂಲಿ, ಕೃಷ್ಣ ತಂಬೂರ, ವೃಷಭ ಡಂಗನವರ, ಆಯುಷ್ ಇತರರು ಇದ್ದರು.

10 ಸಿಸಿ ಕ್ಯಾಮರಾ ನಿರ್ವಹಣೆ ನಮ್ಮದು

ನಗರದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಿರ್ವಹಣೆ ಅಸಾಧ್ಯವಾಗಿದೆ ಎಂದು ಇನ್​ಸ್ಪೆಕ್ಟರ್ ಆನಂದ ಒನಕುದುರೆ ಸಭೆಯಲ್ಲಿ ತಿಳಿಸಿದರು. ನಗರ ಪ್ರವೇಶಿಸುವ ಕಡೆ ಅಳವಡಿಸಿರುವ 10 ಸಿಸಿ ಕ್ಯಾಮರಾಗಳ ನಿರ್ವಹಣೆಯನ್ನು ನಮಗೆ ವಹಿಸಿಕೊಡಿ, ನಿಭಾಯಿಸುವ ಮೂಲಕ ನಿಮ್ಮ ಕೆಲಸಕ್ಕೆ ಸಹಕರಿಸುತ್ತೇವೆ ಎಂದು ಎಂದು ಅಶೋಕ ಶೆಟ್ಟರ್ ತಿಳಿಸಿದರು.