ಹುಬ್ಬಳ್ಳಿ: ಲಿಂಗಾಯತ ಉಪ ಸಮುದಾಯಗಳಿಗೆ ಕೇಂದ್ರದ ಒಬಿಸಿ ಹಾಗೂ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2ಎ ಮೀಸಲಾತಿಗೆ ಒತ್ತಾಯಿಸಿ ಡಿ. 23ರಂದು ರಾಜ್ಯಾದ್ಯಂತ ರಕ್ತದಾನ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ರಾಜ್ಯ ಚನ್ನಮ್ಮ ಬಳಗದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ. 5 ಸಾವಿರದಷ್ಟು ಜನ ರಕ್ತದಾನ ಮಾಡುವ ನಿರೀಕ್ಷೆ ಇದೆ ಎಂದು ವೀಣಾ ಕಾಶಪ್ಪನವರ್ ಹೇಳಿದರು. 1994ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗ ಲಿಂಗಾಯತ ಉಪ ಪಂಗಡಗಳನ್ನು ಒಬಿಸಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಪಂಚಮಸಾಲಿ ನಾಯಕರು ಮೀಸಲಾತಿ ಬಗ್ಗೆ ವಿಚಾರ ಮಾಡಿದ್ದು ಕಡಿಮೆ. ಇತ್ತೀಚೆಗೆ ನಾವು ಹೋರಾಟ ಮಾಡಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೂರಕವಾಗಿ ಸ್ಪಂದಿಸಿದ್ದರು. ಆದರೆ, ಕೊನೆ ಹಂತದಲ್ಲಿ ಕೈ ಬಿಟ್ಟಿದ್ದು ಸಮಾಜಕ್ಕೆ ನೋವು ತಂದಿದೆ. ಹಾಗಾಗಿ ಮತ್ತೆ ಹೋರಾಟ ಕೈಗೊಂಡಿದ್ದೇವೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಪಾದಯಾತ್ರೆ: ಮೀಸಲಾತಿಗೆ ಒತ್ತಾಯಿಸಿ ಜನವರಿ 14ರಿಂದ ಕೂಡಲಸಂಗಮದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪಾದಯಾತ್ರೆಯು ಯಲಬುರ್ಗಾ, ಕೊಪ್ಪಳ, ಮುಂಡರಗಿ, ಹರಿಹರ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 12ರಂದು ಬೆಂಗಳೂರು ವಿಧಾನಸೌಧದವರೆಗೆ ನಡೆಯಲಿದೆ. ಪ್ರತಿ ದಿನ 20 ಕಿ.ಮೀ. ಸಂಚರಿಸಲಿದ್ದೇವೆ. ಪ್ರತಿ 10 ಕಿ.ಮೀ. ಅಂತರದಲ್ಲಿ ಬಹಿರಂಗ ಸಭೆ ಆಯೋಜಿಸುತ್ತೇವೆ. ಪಾದಯಾತ್ರೆಯ ಆರಂಭದಲ್ಲಿ 2 ಲಕ್ಷ ಜನ, ಮುಕ್ತಾಯ ದಿನ 10 ಲಕ್ಷ ಜನರನ್ನು ಸೇರಿಸಲಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಂದಕುಮಾರ ಪಾಟೀಲ, ಸಂಯುಕ್ತಾ ಪಾಟೀಲ, ದೀಪಾ ಗೌರಿ, ಸ್ವಾತಿ ಮಳಗಿ, ಇನ್ನಿತರರು ಇದ್ದರು.