ಚಿತ್ರದುರ್ಗ: ಗ್ರಾಮ ಪಂಚಾಯಿತಿಗಳ ನೌಕರರ, ಸದಸ್ಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಅ. 4ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ನಯಾಜ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಸಂಘಗಳು ಹಾಗೂ ಜಿಲ್ಲಾ ಗ್ರಾಪಂ ಸದಸ್ಯರ ಒಕ್ಕೂಟವೂ ಧರಣಿ ಬೆಂಬಲಿಸುತ್ತಿದೆ ಎಂದರು.
ಮಹಾತ್ಮಗಾಂಧಿ ನರೇಗಾ, ಪಂಚತಂತ್ರ 2.0, ಇ-ಸ್ವತ್ತು, 15ನೇ ಹಣಕಾಸು ಯೋಜನೆ, ಎಲ್ಲ ಬಗೆಯ ವಸತಿ ಯೋಜನೆ, ಇ-ಜನ್ಮ, ಸ್ವಚ್ಛ ಭಾರತ್ ಮಿಷನ್, ಬಾಪೂಜಿ ಸೇವಾ ಕೇಂದ್ರ ಸೇರಿ ಗ್ರಾಪಂ ಸಂಬಂಧ ಇನ್ನಿತರೆ ಕಚೇರಿಗಳಲ್ಲೂ ಕರ್ತವ್ಯ ಸ್ಥಗಿತಗೊಳಿಸಿ ಧರಣಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಪಂಗಳಲ್ಲಿ ಅನುದಾನ ನೀಡದ ಯೋಜನೆಗಳನ್ನೂ ಜಾರಿಗೆ ತರುತ್ತಿರುವುದೇ ಅವೈಜ್ಞಾನಿಕ. ಹೀಗಾಗಿ ಸರ್ಕಾರದಿಂದ ನೌಕರರ ಮೇಲೆ ಒತ್ತಡ ಹೆಚ್ಚಾಗಿದ್ದು, ಜೀವಂತ ಶವವಾಗಿದ್ದೇವೆ. ಅಲ್ಲದೆ, ಸದಸ್ಯರ, ನೌಕರರ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗುತ್ತಿದೆ ಎಂದು ದೂರಿದರು.
ಪಿಡಿಒ ಪಾತಣ್ಣ ಮಾತನಾಡಿ, ಮಗುವಿಗೆ ಹಾಲುಣಿಸುವ ಮಹಿಳಾ ಕೂಲಿಕಾರರು ಕೂಸಿನ ಮನೆಯಲ್ಲಿ ಬಿಟ್ಟು ಕೆಲಸಕ್ಕಾಗಿ ಏಳೆಂಟು ಕಿ.ಮೀ ದೂರ ಹೋಗಲು ಹೇಗೆ ಸಾಧ್ಯ?. ಅದಕ್ಕಾಗಿ ಇದೊಂದು ಅವೈಜ್ಞಾನಿಕ ಯೋಜನೆ. ಅಂಗನವಾಡಿಗಳನ್ನೇ ಉನ್ನತೀಕರಿಸಿ ಅಲ್ಲಿಯೇ ನಡೆಸುವುದು ಉತ್ತಮ. ಅಲ್ಲದೆ, ನೌಕರರ ಕೊರತೆ, ರೋಸ್ಟರ್ ಪದ್ಧತಿಯಲ್ಲೂ ನೇಮಿಸಿಕೊಳ್ಳಲು ಮುಂದಾಗದಿರುವ ಕಾರಣ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಎಂದು ಬೇಸರಿಸಿದರು.
ಸಂಘ ಹಾಗೂ ಒಕ್ಕೂಟದ ಪದಾಧಿಕಾರಿಗಳಾದ ರಹಮತ್ ಉಲ್ಲಾ, ಸಂತೋಷ್‌ಕುಮಾರ್, ಮಂಜುನಾಥ್, ಶೃತಿ, ವೀರೇಶ್, ಜಗದೀಶ್, ಕೃಷ್ಣ, ಸತೀಶ್, ರುದ್ರೇಶ್, ವಿಜಯ್‌ಕುಮಾರ್, ವಾಜೀದ್, ಲಿಂಗರಾಜ್ ಇತರರಿದ್ದರು.