ಬೀದರ್: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ರಾಜ್ಯ ಅಮೆಚೂರ ಸೈಕ್ಲಿಂಗ್ ಅಸೊಸಿಯೇಷನ್ ಹಾಗೂ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೊಸಿಯೇಷನ್ ವತಿಯಿಂದ ನಗರದಲ್ಲಿ ನ. 5 ಮತ್ತು 6 ರಂದು ರಾಜ್ಯಮಟ್ಟದ 17ನೇ ಎಂ.ಟಿ.ಬಿ. ಸೈಕ್ಲಿಂಗ್ ಚಾಂಪಿಯನ್‍ಷಿಪ್ ಹಮ್ಮಿಕೊಳ್ಳಲಾಗಿದೆ.
ಬೀದರ್ ಜಿಲ್ಲೆಯ 27 ಕ್ರೀಡಾಪಟುಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 250 ಕ್ರೀಡಾಪಟುಗಳು ಹಾಗೂ 60 ಅಧಿಕಾರಿಗಳು ಸೈಕ್ಲಿಂಗ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಮುರಳಿಧರ ಎಕಲಾರಕರ್ ತಿಳಿಸಿದ್ದಾರೆ.
ಪಾಪನಾಶ ದೇವಸ್ಥಾನ ಹತ್ತಿರದ ಬಸವಗಿರಿಯಲ್ಲಿ ಸೈಕ್ಲಿಂಗ್ ನಡೆಯಲಿದೆ. ಕ್ರೀಡಾಪಟುಗಳಿಗೆ ಶಾಹೀನ್ ಕಾಲೇಜಿನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಸೈಕ್ಲಿಂಗ್‍ಗೆ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.
ಇಂದು ಉದ್ಘಾಟನೆ: ಶನಿವಾರ ಬೆಳಿಗ್ಗೆ 10ಕ್ಕೆ ಬಸವಗಿರಿಯಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದಲ್ ಖದೀರ್ ಅವರು ಸೈಕ್ಲಿಂಗ್ ಚಾಂಪಿಯನ್‍ಷಿಪ್‍ಗೆ ಚಾಲನೆ ನೀಡುವರು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಕ್ರೀಡಾ ಜ್ಯೋತಿ ಬೆಳಗಿಸುವರು. ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೊಸಿಯೇಷನ್ ಅಧ್ಯಕ್ಷ ಮುರಳಿಧರ ಎಕಲಾರಕರ್ ಅಧ್ಯಕ್ಷತೆ ವಹಿಸುವರು.
ಬೀದರ್ ಶಾಸಕ ರಹೀಂಖಾನ್, ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪುರ ಮುಖ್ಯ ಅತಿಥಿಗಳಾಗಿ, ಕೆ.ಎ.ಸಿ.ಎ. ಅಧ್ಯಕ್ಷ ರಾಜು ಬಿರಾದಾರ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಕುರ್ಣಿ, ಬೀದರ್‍ನ ಎಂ.ಬಿ.ಎಂ.ಸಿ.ಎಸ್. ಅಧ್ಯಕ್ಷ ಸಂತೋಷ ಮುದುಗೊಂಡ, ಪಾಪನಾಶ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಶೆಟಕಾರ್, ಮುಖಂಡರಾದ ಫಿರೋಜ್‍ಖಾನ್, ಅಭಿ ಕಾಳೆ, ಶೇಕ್ ಅಜರ್ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಹಾಗೂ ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಎನ್. ಅಷ್ಟಗಿ ವಿಶೇಷ ಆಹ್ವಾನಿತರಾಗಿರುವರು ಎಂದು ತಿಳಿಸಿದ್ದಾರೆ.