ಜಿಲ್ಲೆ

ರಾಜ್ಯಮಟ್ಟದ ರೈತ ಪಂಚಾಯತ್ ಸಭೆ 6ಕ್ಕೆ

ಚಿತ್ರದುರ್ಗ: ಸರ್ಕಾರಗಳ ರೈತ ವಿರೋಧಿ ಧೋರಣೆ ವಿರುದ್ಧ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಸಂಯುಕ್ತ ಸಂಘಟನೆಗಳಿಂದ ಕೋಟೆನಗರಿಯ ಓಬವ್ವ ವೃತ್ತದಲ್ಲಿ ಮಾ. 6ರಂದು ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ರೈತ ಪಂಚಾಯತ್ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ ಜೆ.ಯಾದವರೆಡ್ಡಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆಗೆ ತಾತ್ವಿಕ ಅಂತ್ಯ ಕಾಣಿಸದೆ, ಪ್ರತಿಭಟನಾಕಾರರ ಮೇಲೆ ಜಲ ಫಿರಂಗಿ, ಗೋಲಿಬಾರ್, ಅಶ್ರುವಾಯು ಸಿಡಿಸಿದ್ದಾರೆ. ಇದು ಪೈಚಾಚಿಕ ಕೃತ್ಯವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳಿಂದ ದಿನೇ ದಿನೆ ಅನ್ನದಾತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಾಲ ಹೆಚ್ಚುತ್ತಿದ್ದು, ಬೀದಿಗೆ ಬೀಳುವಂತಾಗಿದೆ. ವೈಜ್ಞಾನಿಕ ಬೆಲೆ ನಿಗದಿಪಡಿಸುವ ಭರವಸೆ ಹುಸಿಯಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ವಂಚಿಸಿದ್ದಾರೆ. ಹೀಗಾಗಿ ಹೋರಾಟಕ್ಕೆ ಶಕ್ತಿ ತುಂಬಲು ರೈತ, ಜನಪರ ಸಂಘಟನೆಗಳ 500ಕ್ಕೂ ಹೆಚ್ಚು ಪದಾಧಿಕಾರಿಗಳು ಪಂಚಾಯತ್ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದೇಶಕ್ಕೆ ನರೇಂದ್ರಮೋದಿ ಪ್ರಧಾನಿಯಾದ ನಂತರ ಯಾರೂ ನೆಮ್ಮದಿಯಿಂದ ಬದುಕುತ್ತಿಲ್ಲ. ಜಗತ್ತಿನ 100 ಪ್ರತಿಷ್ಠಿತ ವಿವಿಗಳಲ್ಲಿ ಭಾರತದ ಒಂದೂ ವಿವಿ ಸೇರಿಲ್ಲವೆಂದರೆ ನಮ್ಮ ಶೈಕ್ಷಣಿಕ ಸ್ಥಿತಿ-ಗತಿ ಹೇಗಿದೆ ಎಂಬುದು ಗೊತ್ತಾಗುತ್ತದೆ. ಕಾರ್ಮಿಕರಿಂದ 12 ಗಂಟೆ ದುಡಿಸಿಕೊಳ್ಳುತ್ತಿದ್ದು, ವಿಶ್ವದ ಯಾವ ರಾಷ್ಟ್ರದಲ್ಲೂ ಈ ವ್ಯವಸ್ಥೆ ಇಲ್ಲ ಎಂದರು.

ಶಿಕ್ಷಣ, ಆರೋಗ್ಯ, ನೀರಾವರಿಗೆ ಆದ್ಯತೆ ನೀಡುತ್ತಿಲ್ಲ. ವಿವಿಧ ಕ್ಷೇತ್ರ ಖಾಸಗೀಕರಣವಾಗಿವೆ. ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗದ ಧಾರುಣ ಪರಿಸ್ಥಿತಿ ಇದೆ. ಯುವಕರಿಗೆ ಉದ್ಯೋಗ ಕಲ್ಪಿಸದೆ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ವಿಶ್ವದಲ್ಲೇ ಹಸಿವಿನಲ್ಲಿ ಭಾರತ 111ನೇ ಸ್ಥಾನದಲ್ಲಿದೆ ಎಂದು ಬೇಸರಿಸಿದರು.

ಸಂಯುಕ್ತ ಸಂಘಟನೆ ಸಮಿತಿಯ ಸಿ.ಕೆ.ಗೌಸ್‌ಪೀರ್, ಶಫಿ ಉಲ್ಲಾ, ಹಂಪಯ್ಯನಮಾಳಿಗೆ ಧನಂಜಯ, ಶಿವಕುಮಾರ್, ಪುರುಷೋತ್ತಮ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ರವಿಕುಮಾರ್ ಇತರರಿದ್ದರು.