ಗಜೇಂದ್ರಗಡ: ಪಟ್ಟಣದಲ್ಲಿ 2ನೇ ಬಾರಿಗೆ ರಾಜ್ಯಮಟ್ಟದ ಯುವಜನ ಮೇಳವನ್ನು ಫೆ.14 ರಿಂದ ಫೆ. 16ರವರೆಗೆ ಆಯೋಜಿಸಲಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಗಜೇಂದ್ರಗಡ ಸಮೀಪ ರಾಜೂರು ಪ್ರವಾಸಿ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಯುವಜನ ಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಗಜೇಂದ್ರಗಡ ಎಪಿಎಂಸಿ ಎದುರು ಇರುವ ಬಯಲಿನಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಭದ್ರತೆ, ವೇದಿಕೆ ಅಲಂಕಾರ, ಸ್ಮರಣ ಸಂಚಿಕೆ, ಆಹ್ವಾನ ಪತ್ರಿಕೆ, ಸ್ವಚ್ಛತೆ , ಕುಡಿಯುವ ನೀರು, ಸ್ಪರ್ಧಾಳುಗಳಿಗೆ ಗುರುತಿನ ಚೀಟಿ ನೀಡುವಿಕೆ, ಅವರಿಗೆ ಸಾರಿಗೆ, ವಸತಿ, ಊಟೋಪಹಾರ ಮುಂತಾದ ವ್ಯವಸ್ಥೆಗಳ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಶಾಸಕ ಕಳಕಪ್ಪ ಬಂಡಿ ಚರ್ಚೆ ನಡೆಸಿದರು. ರಾಜ್ಯಮಟ್ಟದ ಯುವಜನ ಸಮ್ಮೇಳನ ವ್ಯವಸ್ಥಿತವಾಗಿ ಯಶಸ್ವಿಯಾಗಿ ನಡೆಸಲು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಯುವಜನ ಮೇಳಕ್ಕೆ ಸರ್ಕಾರದಿಂದ 40 ಲಕ್ಷ ರೂ. ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಭಾಗವಹಿಸುವ ಸ್ಪರ್ಧಿಗಳಿಗೆ ಕಾಲಕಾಲೇಶ್ವರದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾಕಾರಿಗಳಿಗೆ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ ವೇದಿಕೆ, ವಸತಿ, ಸಾರಿಗೆ ಸೇರಿ ವಿವಿಧ ಸಮಿತಿಗಳ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನರಗುಂದ ಡಿವೈಎಸ್ಪಿ ಶಿವಾನಂದ ಕಟಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ್ ಮುಧೋಳ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕೆ. ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ರೋಣ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡರ, ರೋಣ ತಾ.ಪಂ. ಇಒ ಸಂತೋಷಕುಮಾರ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಇತರರು ಭಾಗವಹಿಸಿದ್ದರು.