ಜಿಲ್ಲೆ

ರಾಜ್ಯಮಟ್ಟದ ಪ್ರಶಸ್ತಿಗೆ ತಿಪ್ಪೇಸ್ವಾಮಿ ಭಾಜನ

ಕೊಂಡ್ಲಹಳ್ಳಿ: ರೇಷ್ಮೆಸೀರೆ ಹಾಗೂ ಕಂಬಳಿ ನೇಯ್ಗೆಗೆ ನಾಡಿನಾಚೆಗೂ ಖ್ಯಾತಿ ಪಡೆದಿರುವ ಹಿರಿಯ ನೇಕಾರ ಬಿ.ಟಿ.ತಿಪ್ಪೇಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ಕೈಮಗ್ಗ ಹಾಗೂ ಜವಳಿ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಲಭಿಸಿದೆ.
ಕೊಂಡ್ಲಹಳ್ಳಿಯ ಹಾಲುಮತಸ್ಥ ಸಮುದಾಯದ ಬಾನಪ್ಪನವರ ತಿಪ್ಪೇಸ್ವಾಮಿ 45 ವರ್ಷಗಳಿಂದಲೂ ಕಂಬಳಿ ನೇಯ್ಗೆ ಕಲೆ ರೂಢಿಸಿಕೊಂಡಿದ್ದಾರೆ. ಆರಂಭದಿಂದ ಪಟ್ಟೆ ಕಂಬಳಿ, ನೆರೆ ಕಂಬಳಿ, ಕರಿ ಕಂಬಳಿ, ಅಡಿಕೆ ಕಂಬಳಿ ಸೇರಿದಂತೆ ವಿವಿಧ ನಮೂನೆಯ ಕಂಬಳಿಗಳನ್ನು ನೇಯ್ದು ವಿಶೇಷ ಛಾಪು ಮೂಡಿಸಿದ್ದಾರೆ.
ಬೆಂಗಳೂರಿನ ಸಾನಿಯಾ ಸಭಾಂಗಣದಲ್ಲಿ ಆ.7ರಂದು ನಡೆಯುವ 9ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ಕೈ ಮಗ್ಗ ಹಾಗೂ ಜವಳಿ ಉಪ ನಿರ್ದೇಶಕ ಶಿವರಾಜ್ ಕುಲಕರ್ಣಿ ಪತ್ರಿಕೆಗೆ ತಿಳಿಸಿದ್ದಾರೆ.