ಜಿಲ್ಲೆ

ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಡಾ. ಒ.ಆರ್. ನಟರಾಜು ಚಾಲನೆ

ಹಾಸನ: ಯಾರು ಚದುರಂಗ ಆಟವನ್ನು ಕಲಿಯುತ್ತಾರೆ ಅವರು ತಮ್ಮ ಜೀವನದಲ್ಲಿ ತಾಳ್ಮೆ, ಸಹನೆ ಹಾಗೂ ಬುದ್ಧಿವಂತರಾಗುತ್ತಾರೆ ಎಂದು ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ಒ.ಆರ್. ನಟರಾಜು ತಿಳಿಸಿದರು.
ನಗರದ ಪಶು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕದಂಬ ಚೆಸ್ ಅಕಾಡೆಮಿ, ಎನ್.ಟ್.ಆರ್. ಚಾರಿಟಬಲ್ ಟ್ರಸ್ಟ್ ಹಾಗೂ ಕಾಲೇಜಿನ ಸಹಭಾಗಿತ್ವ ಹಮ್ಮಿಕೊಂಡಿರುವ ಎರಡು ದಿನಗಳ 19 ವರ್ಷದೊಳಗಿನ ಬಾಲಕ- ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಚೆಸ್ ಆಟ ಆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಎಂಬುದು ಬುದ್ಧಿವಂತ ಆಟ. ಆರನೇ ಶತಮಾನದಲ್ಲೇ ಈ ಕ್ರೀಡೆ ಚೆಸ್ ಪ್ರಾರಂಭವಾಗಿದ್ದು, ಒಂಬತ್ತನೆ ಶತಮಾನದಲ್ಲಿ ಅಂತಾರಾಷ್ಟ್ರೀಯ ಆಟವಾಗಿ ರೂಪಗೊಂಡಿದೆ ಎಂದರು.
ಎರಡು ದಿನಗಳ ಕಾಲ ನಡೆಯುವ ಚೆಸ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸ್ಪರ್ಧಾಳುಗಳು ಭಾಗವಹಿಸಿ ಉತ್ತಮವಾಗಿ ಆಟವಾಡಿ. ಎಲ್ಲರಿಗೂ ಗೆಲುವು ಸಿಗುವುದಿಲ್ಲ. ಒಬ್ಬರೂ ಸೋಲು ಅನುಭವಿಸಿದರೆ ಮತ್ತೊಬ್ಬರು ಗೆಲ್ಲಲು ಸಾಧ್ಯ. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಎಂದು ಶುಭ ಹಾರೈಸಿದರು.
ಕದಂಬ ಚೆಸ್ ಅಕಾಡೆಮಿಯ ಅಧ್ಯಕ್ಷರಾದ ರಶ್ಮಿ ಕಿರಣ್ ಮಾತನಾಡಿ, ಮಕ್ಕಳಲ್ಲಿ ಯಾವ ಕ್ರೀಡೆ ಇಷ್ಟವೋ ಅದನ್ನು ಪೋಷಕರು ಪ್ರೋತ್ಸಾಹಿಸಬೇಕು. ಇಂದು ಇಲ್ಲಿ ಪೋಷಕರು ಮಳೆಯನ್ನು ಲೆಕ್ಕಿಸದೆ ಚೆಸ್ ಆಟೋಟಕ್ಕೆ ತಮ್ಮ ಮಕ್ಕಳನ್ನು ಕರೆ ತಂದಿರುವುದು ಸಂತೋಷವಾಗಿದೆ. 200 ಜನ ಮಕ್ಕಳು ಈ ಚೆಸ್ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದಾರೆ. ಆಟ ಎಂದರೆ ಕ್ರಿಕೆಟ್, ಪುಟ್ಬಾಲ್, ಬ್ಯಾಂಡ್ಮಿಂಟನ್, ವಾಲಿಬಾಲ್ ಇತರೆ ಹೆಸರನ್ನು ಹೇಳುತ್ತೇವೆ. ಪ್ರಸ್ತುತ ದಿನಗಳಲ್ಲಿ ಚೆಸ್ ಕೂ ಗಣನೀಯವಾಗಿ ಗಮನ ಸೆಳೆದಿದೆ. ಜೀವನದಲ್ಲಿ ಬಹುತೇಕರು ಚೆಸ್ ಆಟ ಆಡಿರುತ್ತೇವೆ. ಆದರೆ ಕೆಲವರು ಮಾತ್ರ ಈ ಆಟವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದರು.
ಯಾವುದೇ ಆಟವಾಗಿರಲಿ ಸೋಲು- ಗೆಲುವು ಬಂದಾಗ ಸಮಾನವಾಗಿ ಸ್ವೀಕರಿಸಿ ಹೆಚ್ಚಿನ ತರಬೇತಿ ಪಡೆದು ನಿಮ್ಮ ಆಟವನ್ನು ಮುಂದುವರೆಸಿದರೆ ಮುಂದೆ ಜಯ ನಿಮ್ಮದಾಗುತ್ತದೆ. ಚೆಸ್ ಎನ್ನುವುದು ಒಂದು ಕಾಲ್ಪನಿಕ ಯುದ್ಧ ಅಷ್ಟೆ. ಇಲ್ಲಿ ರಕ್ತ ಹರಿಸುವುದಿಲ್ಲ. ಆದರೆ ನಿಮ್ಮ ಬುದ್ದಿಯನ್ನು ಹೊರ ಹಾಕುತ್ತದೆ. ಚೆಸ್ ಆಟವನ್ನು ಗುಪ್ತರ ಕಾಲದಲ್ಲಿ ಅಭಿವೃದ್ಧಿಗೊಳಿಸಿದ್ದು, ಯುದ್ಧದಲ್ಲಿ ತಂತ್ರಗಳನ್ನು ಯಾವ ರೀತಿ ಮಾಡಬೇಕು ಬಗ್ಗೆ ತಿಳಿಯಲು ಈ ಆಟ ಚಾಲ್ತಿಗೆ ಬಂದಿದೆ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾರಿಗೂ ಶುಭವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಅರವಿಂದ ಶಾಸ್ತ್ರಿ, ಜಿಲ್ಲಾ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಮಂಜುನಾಥ್ ಪ್ರಸಾದ್, ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಕದಂಬ ಚೆಸ್ ಅಕಾಡೆಮಿಯ ಸ್ಥಾಪಕರಾದ ಎಂ.ಟಿ. ತ್ಯಾಗರಾಜ್, ಸಹ ಕಾರ್ಯದರ್ಶಿ ರಾಧಾ ಜಗದೀಶ್, ಚಿಕ್ಕಮಗಳೂರು ಜಿಲ್ಲಾ ಅಸೋಷಿಯೇಷನ್ ಕಾರ್ಯದರ್ಶಿಎಂ. ಗಿರೀಶ್, ಕದಂಬ ಚೆಸ್ ಅಕಾಡೆಮಿ ಚನ್ನಪಟ್ಟಣ ಶಾಖೆಯ ತರಬೇತಿದಾರರಾದ ಕಾವ್ಯಾ ಚಂದನ್, ತರಬೇತುದಾರರಾದ ನಯನಾ ಸತೀಶ್, ಅನಿಲ್ ಇತರರು ಉಪಸ್ಥಿತರಿದ್ದರು.