ಚಿತ್ರದುರ್ಗ: ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯಪಾಲರನ್ನು ಅವಮಾನಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕು ಎಂದು ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್ ಸಿದ್ಧಾಪುರ ಮಾತನಾಡಿ, ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುವ ಬದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ಧ ಏಕವಚನ ಪದ ಪ್ರಯೋಗ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ನಾವುಗಳ್ಯಾರು ಪ್ರತಿಭಟಿಸದೆ, ಕಾನೂನು ಗೌರವಿಸಿದ್ದೇವೆ. ಅದೇ ರೀತಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಕಾನೂನು ಹೋರಾಟಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ರಾಜ್ಯಪಾಲರ ವಿರುದ್ಧ ಸಂವಿಧಾನ ಬಾಹಿರ ಹೇಳಿಕೆ ಸರಿಯಲ್ಲ. ಐವಾನ್ ಡಿಸೋಜ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ ಇನ್ನಿತರರು ಹೀನಾಯ ಪದ ಬಳಕೆ ನಿಲ್ಲಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಸಂಪತ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ರೀತಿಯ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿರುವುದನ್ನು ಸಹಿಸದ ಕಾಂಗ್ರೆಸ್ಸಿಗರ ನಡೆ ಕೂಡ ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಬಾಳೆಕಾಯಿ ರಾಮ್‌ದಾಸ್, ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ಸೌಭಾಗ್ಯಾ ಬಸವರಾಜನ್, ನವೀನ್ ಚಾಲುಕ್ಯ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಚಂದ್ರು, ಭಾರ್ಗವಿ ದ್ರಾವಿಡ್, ನಂದಿ ನಾಗರಾಜ್, ಬಸಮ್ಮ, ವೀರೇಶ್, ಕಿರಣ್, ವೀಣಾ, ಶಂಭು ನಗರಸಭೆ ಸದಸ್ಯ ಸುರೇಶ್ ಇತರರಿದ್ದರು.