ಜಿಲ್ಲೆ

ರಾಜ್ಯಪಾಲರ ಹುದ್ದೆ ಒಕ್ಕೂಟ ವ್ಯವಸ್ಥೆಗೆ ಮಾರಕ : ಹಿರಿಯ ವಕೀಲ ರವಿವರ್ಮ ಕುಮಾರ್ ಕಳವಳ

ಸದೇಶ್ ಕಾರ್ಮಾಡ್

ಮೈಸೂರು: ದೇಶದ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ರಾಜ್ಯಪಾಲರ ಹುದ್ದೆ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ದೇಶವ್ಯಾಪಿ ಹೋರಾಟ ನಡೆಸಬೇಕು ಎಂದು ಹಿರಿಯ ವಕೀಲ ರವಿವರ್ಮ ಕುಮಾರ್ ಕರೆ ನೀಡಿದರು.

ಸಂವಿಧಾನ ಅಂಗೀಕಾರದ ಅಮೃತ ಮಹೋತ್ಸವ ಅಂಗವಾಗಿ ದಸರಾ ರಾಷ್ಟ್ರೀಯ ಸಮ್ಮೇಳನ ಉಪ ಸಮಿತಿ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಮತ್ತು ಜಿಲ್ಲಾಡಳಿತ ವತಿಯಿಂದ ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಜಿಎಸ್‌ಟಿ ಹಾಗೂ ರಾಜ್ಯಪಾಲರ ಹುದ್ದೆ ಒಕ್ಕೂಟ ವ್ಯವಸ್ಥೆಗೆ ಸವಾಲೊಡ್ಡುತ್ತಿದ್ದು, ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸುವ ಅವಶ್ಯಕತೆ ಇದೆ. ಇದಕ್ಕೆ ದೊಡ್ಡ ಹೋರಾಟದ ಅವಶ್ಯಕತೆ ಇದ್ದು, ಈ ಹೋರಾಟ ಯಶಸ್ವಿಯಾದರೆ ಮಾತ್ರ ಒಕ್ಕೂಟ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಸರ್ಕಾರ (ಆಡಳಿತ ಪಕ್ಷ) ತಮ್ಮ ಪಕ್ಷ ಆಡಳಿತದಲ್ಲಿ ಇಲ್ಲದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣ ಮಾಡಲು ರಾಜ್ಯಪಾಲರ ಹುದ್ದೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಬಂದಿರುವ ಬಹುದೊಡ್ಡ ಕಂಟಕವಾಗಿದೆ. ತಮಿಳುನಾಡು, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೆರಿಗೆ ಸಂಗ್ರಹದಲ್ಲಿ ರಾಜ್ಯ ಸಾರ್ವಭೌಮವಾಗಿತ್ತು. ಆದರೆ, ಜಿಎಸ್‌ಟಿ ವ್ಯವಸ್ಥೆ ಬಂದ ನಂತರ ರಾಜ್ಯ ಸರ್ಕಾರ ಕೇಂದ್ರದ ಮುಂದೆ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ತೆರಿಗೆ ಪಾಲನ್ನು ಪಡೆಯಲು ರಾಜ್ಯಗಳು ಸುಪ್ರೀಂಕೋರ್ಟ್ ಮೆಟ್ಟಿಲನ್ನು ಸಹ ಏರುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಒಕ್ಕೂಟ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಅಸಿಂಧು ಎಂದು ಘೋಷಿಸಿ ಒಕ್ಕೂಟ ವ್ಯವಸ್ಥೆ ದೇಶದ ಅಡಿಪಾಯ, ಅದನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ದೇಶಕ್ಕೆ ಆರೋಗ್ಯಕರವಾದ ಒಕ್ಕೂಟ ವ್ಯವಸ್ಥೆಯನ್ನು ಸಂವಿಧಾನ ನೀಡಿದ್ದು, ಅದನ್ನು ಕಾಪಾಡುವ ಕಾರ್ಯ ಆಗಬೇಕು ಎಂದರು.

ನಮ್ಮ ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಲು ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಇಲ್ಲವಾದಲ್ಲಿ ಬಾಲಢ್ಯರು ಮತ್ತಷ್ಟು ಬಲಾಢ್ಯರಾಗುತ್ತಾರೆ, ದುರ್ಬಲರು ಮತ್ತಷ್ಟು ದುರ್ಬಲರಾಗುತ್ತಾರೆ. ಲೋಕಸಭೆ, ವಿಧಾನಸಭೆಗೆ ಆಯ್ಕೆಯಾಗಲು, ಐಎಎಸ್, ಕೆಎಎಸ್ ಅಧಿಕಾರಿಗಳಾಗಲು ಮೀಸಲಾತಿ ವ್ಯವಸ್ಥೆ ಇದೆ. ಆದರೆ, ನ್ಯಾಯಾಧೀಶರಾಗಲು ಮೀಸಲಾತಿ ವ್ಯವಸ್ಥೆ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಎಲ್ಲ ವರ್ಗದವರಿಗೂ ಸಮಾನ ಅವಕಾಶ ದೊರೆಯುವ ಅವಶ್ಯಕತೆ ಇದೆ ಎಂದು ಅಬಿಪ್ರಾಯಪಟ್ಟರು.

ದೇಶದ ಜೈಲುಗಳಲ್ಲೂ ಜಾತಿ ಆಧಾರದ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಜೈಲುಗಳ ಶೌಚಗೃಹ ಶುಚಿಗೊಳಿಸುವ ಜವಾಬ್ದಾರಿ ಯನ್ನು ತಳ ಸಮುದಾಯದವರಿಗೆ ನೀಡಲಾಗುತ್ತಿದೆ. ತಲತಲಾಂತರಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಮುದಾಯದವರೇ ಜೈಲುಗಳಲ್ಲೂ ಶೌಚಗೃಹ ಶುಚಿಗೊಳಿಸುವ ವ್ಯವಸ್ಥೆ ಇಂದಿಗೂ ಇದೆ. ಜಾತಿ ಆಧಾರಿತ ತಾರತಮ್ಯ ನಿಲ್ಲಬೇಕು. ತಳ ಸಮುದಾದ ಮೇಲೆ ಬಹಳ ವ್ಯವಸ್ಥಿತವಾಗಿ ದಬ್ಬಾಳಿಕೆ ನಡೆಯುತ್ತಿದೆ ಸುಂಪ್ರೀಂಕೋರ್ಟ್ ಸಹ ಅಭಿಪ್ರಾಯಪಟ್ಟಿದೆ ಎಂದರು.

ನಮ್ಮ ದೇಶದಲ್ಲಿ ಹುಟ್ಟಿನಿಂದಲೇ ಕೆಲವು ಸಮುದಾಯಗಳು ಗೌರವಕ್ಕೆ ಪಾತ್ರರಾದರೆ, ಕೆಲವು ಸಮುದಾಯಗಳು ಹುಟ್ಟಿನಿಂದಲೇ ಅಗೌರವಕ್ಕೆ ಗುರಿಯಾಗುತ್ತಾರೆ. ಸಾವಿನ ನಂತರವೂ ಜಾತಿ ಮುಂದುವರೆಯುತ್ತದೆ. ವಿವಿಧ ಜಾತಿಗಳಿಗೂ ಪ್ರತ್ಯೇಕ ಸ್ಮಶಾನ ಇದೆ. ಸಮಾಜ ದಲ್ಲಿರುವ ಇಂತಹ ಅಸಮಾನತೆ ಹೋಗಲಾಡಿಸಲು ಸಂವಿಧಾನದಲ್ಲಿ ಒತ್ತು ನೀಡಲಾಗಿದೆ. ಈ ಕಾರಣಕ್ಕೆ ತುಳಿತಕ್ಕೆ ಒಳಗಾಗಿರುವ ಸಮುದಾಯಗಳಿಗೆ ಮೀಸಲಾತಿ ಮೂಲಕ ಅವರನ್ನು ಸಮಾಜದಲ್ಲಿ ಮುಂದೆ ತರುವ ಪ್ರಯತ್ನ ನಡೆದಿದೆ. ಜಾತಿ ಮಾತ್ರವಲ್ಲ ಲಿಂಗದ ಆಧಾರದಲ್ಲೂ ತಾರತಮ್ಯ ನಡೆಸಬಾರದು ಎಂದು ಹೇಳಿದರು.

ಪ್ರಪಂಚದ ವಿವಿಧ ದೇಶಗಳ ಸಂವಿಧಾನದ ಆಯುಷ್ಯದ ಅವಲೋಕನ ನಡೆಸಿದರೆ ಸಂವಿಧಾನದ ಆಯುಷ್ಯ ಸರಾಸರಿ 17 ವರ್ಷ ಮಾತ್ರ. ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ದೇಶದ ಸಂವಿಧಾನ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ, ಅದೇ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಸಂವಿಧಾನ ಇಂದಿಗೂ ಅಸ್ತಿತ್ವದಲ್ಲಿ ಇದ್ದು, ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.

ದೇಶದ ಮೇಲೆ 1975ರಲ್ಲಿ ಸಂವಿಧಾನವನ್ನು ಕಸದ ಬುಟ್ಟಿಗೆ ಹಾಕಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಯಿತು. ಆ ಸಂದರ್ಭ ಮಾತನಾಡುವ ಸ್ವಾತಂತ್ರೃ ಸಹ ಇರಲಿಲ್ಲ. ಆ ಸಂದರ್ಭದಲ್ಲಿ ಈ ದೇಶದ ಸಂವಿಧಾನವನ್ನು ರಕ್ಷಣೆ ಮಾಡಿದ್ದು ದೇಶದ ಪ್ರಜೆಗಳು ಎಂಬುದು ವಿಶೇಷ. ದೇಶದ ಪ್ರಜೆಗಳು ಸರ್ವಾಧಿಕಾರಿಯನ್ನು ಅಧಿಕಾರದಿಂದ ಕಿತ್ತೊಗೆದು ಸಂವಿಧಾನವನ್ನು ಮರು ಸ್ಥಾಪಿಸಿದರು. ಆ ನಂತರ ದೇಶದ ಮೇಲೆ ಸುಲಭವಾಗಿ ತುರ್ತು ಪರಿಸ್ಥಿತಿ ಹೇರಬಾರದು ಎಂಬ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಇದರಿಂದ ದೇಶದ ಒಕ್ಕೂಟ ವ್ಯವಸ್ಥೆ ಮತ್ತಷ್ಟು ಭದ್ರವಾಯಿತು ಎಂದರು. ವೇದಿಕೆಯಲ್ಲಿ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ಗೌಡ ಇದ್ದರು.