ಬಳ್ಳಾರಿ : ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವ ಅನುಮತಿ ವಿರೋಧಿಸಿ, ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಶಾಸಕರು, ಸಂಸದ ನೇತೃತ್ವದಲ್ಲಿ ನಗರದ ರಾಯಲ್ ವೃತ್ತದಿಂದ ಡಿಸಿ ಕಚೇರಿಯವರೆಗೆ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಂಪ್ಲಿ ಶಾಸಕ ಜೆ.ಎನ್. ಗಣೇಶ ಮಾತನಾಡಿ, ಕಳೆದ ಅವಧಿಯಲ್ಲಿ ಬಿಜೆಪಿ ನಾಯಕರು ಸಾವಿರಾರು ಕೋಟಿ ರೂ. ಖರ್ಚು ಮಾಡಿ ಸರ್ಕಾರ ರಚನೆ ಮಾಡಿ ಭ್ರಷ್ಟಚಾರ ಆಡಳಿತ ನಡೆಸಿದರು. ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಜನಾರ್ಧನರೆಡ್ಡಿ, ಮುರುಗೇಶ್ ನಿರಾಣಿ ಅವರ ಮೇಲಿಯೂ ಆರೋಪಗಳು ಕೇಳಿ ಬಂದಿದ್ದವು. ಆದರೆ, ಅವರ ಮೇಲೆ ಏಕೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ ಪ್ರಶ್ನಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮುಡಾದ ನಿವೇಶನಗಳು ಹಂಚಿಕೆ ಮಾಡಲಾಗಿತ್ತು. ಆಗಲೇ ಏಕೆ ವಾಪಾಸ್ ಪಡೆಯಲಿಲ್ಲ. ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಅವರಿಗೆ ಮೈಸೂರು ಭಾಗದಲ್ಲಿ ಇರುವ ಜನಪ್ರಿಯತೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಸಹಿಸಿಕೊಳ್ಳುವುದು ಆಗುತ್ತಿಲ್ಲ. ಯಾರೇ ಏನು ಮಾಡಿದರೂ ಸಿದ್ದರಾಮಯ್ಯ ಅವರನ್ನು ಟಚ್ ಮಾಡಲು ಕೂಡ ಆಗುವುದಿಲ್ಲ ಎಂದು ಸವಾಲು ಹಾಕಿದರು.
ಬಳಿಕ ನೂರರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರ ಹಾಕಿದರು. ರಾಜ್ಯಪಾಲರ ಭಾವಚಿತ್ರ ಪೋಸ್ಟರ್‌ಗಳ ಮೇಲೆ ಪ್ರಜಾಪ್ರಭುತ್ವದ ಕಗ್ಗೂಲೆ ಎಂಬ ಪ್ರೋಸ್ಟರ್ ಹಿಡಿದು ಪ್ರದರ್ಶಿಸಿದರು.
ಪ್ರಮುಖರಾದ ಎಲ್. ಮಾರೆಣ್ಣ, ವೆಂಕಟೇಶ್ ಹೆಗಡೆ, ಬೋಯಪಾಟಿ ವಿಷ್ಣು, ಚನ್ನಬಸವರಾಜ, ತಿಮ್ಮನಗೌಡ, ಕಲ್ಲುಕಂಬ ಪಂಪಾಪತಿ, ಗಾದಿಲಿಂಗನಗೌಡ ಇದ್ದರು.