ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಈಚೆಗೆ ಪ್ರತಿಭಟನೆ ನಡೆಸಿದರು.
ಬಿ.ಡಿ. ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ರಾಜ್ಯಪಾಲರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಯಾವುದೇ ತಪ್ಪಿಲ್ಲದಿದ್ದರೂ ಮುಡಾ ಹಗರಣದಲ್ಲಿ ಸಿಲುಕಿಸಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಬಿಜೆಪಿಗರು ಮಾಡುತ್ತಿರುವುದು ಖಂಡನೀಯ. ಇದರ ಹಿಂದೆ ಕಾಂಗ್ರೆಸ್ ಸರ್ಕಾರ ಅಲುಗಾಡಿಸುವ ಕುತಂತ್ರ ನಡೆಯುತ್ತಿದೆ ಎಂದು ದೂರಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸೀಟಿನೊಂದಿಗೆ ಅಧಿಕಾರಕ್ಕೆ ಬಂದಿರುವ ಕಾರಣ ಕೋಮುವಾದಿ ಬಿಜೆಪಿಗೆ ಮುಖಭಂಗವಾಗಿದ್ದು, ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಸಿರುವುದು ಕಾನೂನು ಬಾಹಿರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿಗರು ಎಂತಹ ಹೋರಾಟ, ತ್ಯಾಗಕ್ಕೂ ಸಿದ್ದರಿದ್ದೇವೆ. ಇಡೀ ಸಚಿವ ಸಂಪುಟ ಸಿದ್ದರಾಮಯ್ಯ ಬೆನ್ನಿಗಿದೆ. ಅವರ ರಾಜೀನಾಮೆ ಅಗತ್ಯವಿಲ್ಲ. ಬಿಜೆಪಿ-ಜೆಡಿಎಸ್ ನಾಯಕರು ಕೇಳಿದ ಮಾತ್ರಕ್ಕೆ ಕೊಡಲು ಸಾಧ್ಯವಿಲ್ಲ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರು ಶೋಷಿತರ ನ್ಯಾಯದ ಪರವಿರುವ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಮ್ಮತಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದು, ಯಾರೂ ತಾಳ್ಮೆ ಕಳೆದುಕೊಳ್ಳುವ ಅಗತ್ಯವಿಲ್ಲ. ಹಿಂಸಾತ್ಮಕ ಮಾರ್ಗವೂ ಬೇಡ. ಕಾನೂನಾತ್ಮಕ ಹೋರಾಟಕ್ಕೂ ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಇಡಿ, ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಬಿಜೆಪಿ ವಿರೋಧಿಸುವವರ ವಿರುದ್ಧ ದಾಳಿ ನಡೆಸುವ ಪರಿಪಾಠ ಬೆಳೆಸಿಕೊಂಡಿದೆ. ಇದಕ್ಕೆ ಕಾಂಗ್ರೆಸ್ಸಿಗರು ಹೆದರುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಮುಡಾದಲ್ಲಿ ಸಿಎಂ ಪಾತ್ರವಿಲ್ಲ. ಹೀಗಾಗಿ ಇಲ್ಲಸಲ್ಲದ ಆಪಾದನೆಗೆ ರಾಜೀನಾಮೆ ಅಗತ್ಯವಿಲ್ಲ ಎಂದರು.
ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಅಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಆರ್.ಕೆ.ಸರ್ದಾರ್, ಬಿ.ಟಿ.ಜಗದೀಶ್, ಹಾಲಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಕೃಷ್ಣಮೂರ್ತಿ, ಲೋಕೇಶ್‌ನಾಯ್ಕ, ಜಯಣ್ಣ, ಜಿ.ಎಸ್.ಮಂಜುನಾಥ್, ಬಿ.ಯೋಗೇಶ್‌ಬಾಬು, ಪವಿತ್ರಾ, ಸಿ.ಟಿ.ಕೃಷ್ಣಮೂರ್ತಿ, ಎಚ್.ಮಂಜಪ್ಪ, ಮಲ್ಲಿಕಾರ್ಜುನ್, ಮೋಕ್ಷಾ, ಮುನಿರಾ ಎ.ಮಕಾಂದಾರ್, ರುದ್ರಾಣಿ, ನಜ್ಮತಾಜ್, ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್, ಸೈಯದ್ ಖುದ್ದೂಸ್, ಅಲ್ಲಾಭಕ್ಷಿ, ಎನ್.ಡಿ.ಕುಮಾರ್ ಇತರರಿದ್ದರು.