ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಶಿಕ್ಯೂಷನ್ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮುಖಂಡರು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರತಿಕೃತಿ ದಹಿಸಿ ತ್ರೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಎಲ್‌ಐಸಿ ಸರ್ಕಲ್, ಪೊಲೀಸ್ ಪ್ಯಾಲೇಸ್, ಬಸ್ ನಿಲ್ದಾಣದ ಮೂಲಕ ಜಿಲ್ಲಾಡಳಿತ ಭವನದ ಮುಖ್ಯದ್ವಾರ ತಲುಪಿತು. ಅಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸಿದ ಕಾಯಕರ್ತರು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಹಾಗೂ ದೇಶಕಂಡ ಅತ್ಯಂತ ಪ್ರಮಾಣಿಕ ಆಡಳಿತಗಾರ. ಸದಾ ಬಡವರು, ದೀನ ದಲಿತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಆದರೇ ಅವರಿಗೆ ಕಪ್ಪು ಚುಕ್ಕೆ ತರೆಲು ಬಿಜೆಪಿ ಮುಂದಾಗಿದೆ. ರಾಜ್ಯಪಾಲರ ಭವನ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಸಂವಿಧಾನ ಕಾಪಾಡಲು ರಾಜ್ಯಪಾಲರು ಇದ್ದಾರೇ, ಅದು ಬಿಟ್ಟು ಪ್ರಧಾನ ಮೋದಿ, ಅಮಿತ ಶಾ ಸೇವೆಗೆ ಅಲ್ಲ. ಸಂವಿಧಾನ ಕಾಯಲು ಬಂದಿದ್ದೇನೆ, ಸೇವೆಗೆ ಅಲ್ಲ ಎಂದು ಹೇಳಿದ್ದರೇ ರಾಜ್ಯಪಾಲರ ಗೌರವ ಹೆಚ್ಚುತಿತ್ತು, ಆದರೇ ಸದ್ಯ ಅವರ ನಡೆಯಿಂದ ರಾಜ್ಯಪಾಲರ ಹುದ್ದೆಗೆ ಕೂಡಲು ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ವಿಷಯ ೯೦ ವರ್ಷದ ಹಳೇದಾಗಿದ್ದು, ೯೦ ವರ್ಷದ ಹಿಂದೆ ದಲಿತ ವ್ಯಕ್ತಿಯೊಬ್ಬರು ಹರಾಜು ಮಾಡಿದ್ದರು. ಇದು ಸಿಎಂ ಭಾವ ಹೆಸರಿನಲ್ಲಿತ್ತು, ಅದನ್ನು ಸಿಎಂ ಪತ್ನಿ ಪಾರ್ವತಿ ಅವರಿಗೆ ಊಡೊಗೊರೆಯಾಗಿ ನೀಡಲಾಗಿದೆ. ಇಂತಹಲ್ಲೆ ಜಾಗೆ ಕೊಡಿ ಅಂತ ಕೇಳಿರಲಿಲ್ಲ. ಪರಿಹಾರ ರೂಪದಲ್ಲಿ ಮುಡಾ ೫೦:೫೦ ಅನುಪಾತದಲ್ಲಿ ಹಂಚಿಕೆ ಮಾಡಿದೆ. ಎಲ್ಲವು ಕಾನೂನು ಬದ್ಧವಾಗಿದೆ. ಆದರೇ ಬಿಜೆಪಿ ರಾಜಕೀಯ ದುರುದ್ದೇಶದಿಂದ ಕೆದಕಿದೆ. ಬಿಜೆಪಿ ಹಿಂಬಾಗಿಲಿನಿಂದ ಅಽಕಾರಕ್ಕೆ ಬಂದಿದೆ. ಮೋದಿಗೂ ಅಧಿಕಾರ ಮಾಡುವ ಅವಕಾಶ ಜನ ಕೊಟ್ಟಿಲ್ಲ. ಅವರಿವರನ್ನು ಕೂಡಿಸಿಕೊಂಡು ಆಡಳಿತ ನಡೆಸುತ್ತಿದ್ದೀರಿ. ರಾಜ್ಯದ ಜನತೆ ಹಾಗೂ ರಾಜಕಾರಣಿಗಳು ನಿಮ್ಮ ಕುತಂತ್ರಕ್ಕೆ ಬಗ್ಗುವದಿಲ್ಲ ಎಂದು ಗುಡುಗಿದರು.
ಯಾವ ನೈತಿಕತೆ ಮೇಲೆ ಸಿದ್ದು ರಾಜೀನಾಮೆ ಕೇಳುತ್ತಿದ್ದೀರಿ. ಸಂವಿಧಾನದ ಮೇಲೆ ಗೌರವ ಇದ್ದರೆ ಕುಮಾರಸ್ವಾಮಿ, ಮುರುಗೇಶ ನಿರಾಣಿ ವಿರುದ್ದ ತನಿಖೆಗೆ ಅವಕಾಶಕೊಡಿ. ಇವರಿಗೆ ತನಿಖೆ ಆಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಪಕ್ಷ, ಜನತೆ ಇದ್ದಾರೆ ಎಂದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುರ್ಚಿಯನ್ನು ಎಲ್ಲಿ ಸಿದ್ದರಾಮಯ್ಯ ಕಸಿದುಕೊಳ್ಳೋವರೋ ಎನ್ನುವ ಭಯ ಮೂಡಿದೆ. ಹೀಗಾಗಿ ಅವರನ್ನು ಅಽಕಾರದಿಂದ ಕೆಳಗೆ ಇಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ರಾಜ್ಯಪಾಲರು ಎಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮನೆಯಲ್ಲಿ ಭ್ರಷ್ಟಾಚಾರ ಅಡಗಿದೆ. ಇದರಿಂದ ಬಿಜೆಪಿಯನ್ನು ಕಳೆದ ಚುನಾವಣೆಯಲ್ಲಿ ಜನ ಮನೆಗೆ ಕಳುಹಿಸಿದ್ದಾರೆ. ನಿಮ್ಮ ಉಸಿರು ಇರುವರೆಗೂ ಸಿದ್ದರಾಮಯ್ಯ ಹೆಸರು ಕೆಡಿಸಲು ಸಾಧ್ಯವಿಲ್ಲ ಅಂತ ತೀವ್ರ ವಾಗ್ದಾಳಿ ನಡೆಸಿದರು.
ಶಾಸಕ ಜೆ.ಟಿ.ಪಾಟೀಲ, ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಲೋಕಸಭೆ ಚುನಾವಣೆ ಪರಾರ್ಜಿತ ಅಭ್ಯರ್ಥಿ ಸಂಯುಕ್ತ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷರಾದ ಬಾಯಕ್ಕ ಮೇಟಿ, ಬಸವಂತಪ್ಪ ಮೇಟಿ, ಮುಖಂಡರಾದ ರಕ್ಷಿತಾ ಭರತಕುಮಾರ ಈಟಿ, ನಾಗರಾಜ ಹದ್ಲಿ, ಚಂದ್ರಶೇಖರ ರಾಠೋಡ, ರಾಜು ಮನ್ನಿಕೇರಿ, ತಿಮ್ಮಣ್ಣ ಬಟಕುರ್ಕಿ, ಹೊಳಬಸ್ಸು ಶೆಟ್ಟರ, ಉಮೇಶ ಮೇಟಿ, ಮಲ್ಲಿಕಾರ್ಜುನ ಮೇಟಿ, ಸಂಜೀವ ವಾಡಕರ, ನಾರಾಯಣ ದೇಸಾಯಿ, ಎಂ.ಬಿ.ಸೌದಾಗರ, ಚನ್ನವೀರ ಅಂಗಡಿ, ಆನಂದ ಜಿಗಜಿನ್ನಿ ಇತರರು ಇದ್ದರು.