ಜಿಲ್ಲೆ

ರಾಜ್ಯದಲ್ಲೇ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕ

ಚಾಮರಾಜನಗರ: ಸಮಾಜದ ಭದ್ರತೆ, ಸುರಕ್ಷತೆಗಾಗಿ ಪ್ರಾಣ ಮುಡಿಪಾಗಿಟ್ಟ ಪೊಲೀಸರನ್ನು ಸ್ಮರಿಸುವ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ರಾಜ್ಯದಲ್ಲೇ ಅತ್ಯಂತ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ.

ದೇಶದಾದ್ಯಂತ ಪ್ರತಿವರ್ಷವೂ ಅ.21 ಅನ್ನು ಪೊಲೀಸ್ ಹುತಾತ್ಮ ದಿನವಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಎಲ್ಲಾ ಹುತಾತ್ಮ ಪೊಲೀಸರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಚಾಮರಾಜನಗರದ ಜಿಲ್ಲಾ ಶಸಸ ಮೀಸಲು ಪಡೆ ಮೈದಾನದ ಆವರಣದಲ್ಲಿ ಸುಮಾರು 27 ಅಡಿ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕವನ್ನು ಬಹಳ ಆಕರ್ಷಕವಾಗಿ ನಿರ್ಮಾಣ ಮಾಡುತ್ತಿದ್ದು, ದೇಶದಾದ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ಸಮಾಜದ ಸುರಕ್ಷತೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಪೊಲೀಸರನ್ನು ಸ್ಮರಣೆ ಮಾಡುವ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲೇ ಈ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಈಗಾಗಲೇ ಸ್ಮಾರಕದ ಭಾಗಶಃ ಕೆಲಸ ಮುಕ್ತಾಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಸ್ಮಾರಕ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ.

ಹುತಾತ್ಮ ಸ್ಮಾರಕದ ಮಹತ್ವ:

ದೇಶದ ಗಡಿ ಪ್ರದೇಶವಾದ ಲಡಾಖ್‌ನ ಹಾಟ್ ಸ್ಪಿಂಗ್ಸ್‌ನಲ್ಲಿ 1959 ಅ.21 ರಂದು ಚೀನಾ ಸೈನ್ಯವು ನಡೆಸಿದ ದಾಳಿಯಲ್ಲಿ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ 10 ಸಿಬ್ಬಂದಿ ಹುತಾತ್ಮರಾಗಿದ್ದರು. ಇದರ ನೆನಪಿನಾರ್ಥ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಹಾಗೂ ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪಾತ್ರವನ್ನು ಗುರುತಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018 ರಲ್ಲಿ ನವದೆಹಲಿಯ ಚಾಣಕ್ಯಪುರದಲ್ಲಿ ಸುಮಾರು 30 ಅಡಿ ಎತ್ತರದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ್ದರು. ಬಳಿಕ ದೇಶದಾದ್ಯಂತ, ಎಲ್ಲಾ ರಾಜ್ಯಗಳಲ್ಲೂ ಪೊಲೀಸ್ ಸ್ಮಾರಕವನ್ನು ನಿರ್ಮಾಣ ಮಾಡಲಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ಸ್ಮಾರಕವನ್ನು ನಿರ್ಮಾಣ ಮಾಡುತ್ತಿದ್ದು, ಚಾಮರಾಜನಗರದಲ್ಲೂ ಆಕರ್ಷಕವಾದ ಏಕಶಿಲಾ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ.

ರಾಜ್ಯದಲ್ಲೇ ಎತ್ತರದ ಸ್ಮಾರಕ:

ಚಾಮರಾಜನಗರದಲ್ಲಿ ನಿರ್ಮಾಣ ಮಾಡುತ್ತಿರುವ ಪೊಲೀಸ್ ಹುತಾತ್ಮ ಸ್ಮಾರವು ರಾಜ್ಯದಲ್ಲೇ ಅತ್ಯಂತ ಎತ್ತರದ ಸ್ಮಾರಕವಾಗಿದ್ದು, ಸುಮಾರು 27 ಅಡಿ ಎತ್ತರದ ಗ್ರಾನೈಟ್ ಏಕಶಿಲಾ ಸ್ಮಾರಕವಾಗಿದೆ. ಇದನ್ನು ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕ್ಯಾಂಪಾ ಕೋಲಾ ಕಂಪನಿಯು ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡುತ್ತಿದ್ದು, ಸ್ಮಾರಕವು ಪೊಲೀಸರ ಶೌರ್ಯ, ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತದೆ. ಜಿಲ್ಲೆಯ ಪೊಲೀಸ್ ಪಡೆಗಳಿಗೆ ಇದು ಹೆಮ್ಮೆಯ ಸಂಕೇತವಾಗಿದ್ದು, ಪ್ರಾಣದ ಹಂಗನ್ನು ತೊರೆದು ಸಮಾಜವನ್ನು ರಕ್ಷಣೆ ಮಾಡುವ ಪೊಲೀಸ್ ಪಡೆಗಳ ಬದ್ಧತೆಯನ್ನು ಬಲಗೊಳಿಸುತ್ತದೆ.

ಮೈದಾನ ಅಭಿವೃದ್ಧಿಗೂ ಚಿಂತನೆ:

ಜಿಲ್ಲಾ ಶಸಸ ಮೀಸಲು ಪಡೆಯ ಪೆರೇಡ್ ಮೈದಾನವನ್ನು ಮಾದರಿ ಜಿಲ್ಲಾ ಕವಾಯತು ಮೈದಾನವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆಯನ್ನು ಪೊಲೀಸ್ ಇಲಾಖೆ ನಡೆಸುತ್ತಿದೆ. ಶಸಸ ಮೀಸಲು ಪಡೆಯ ಪೊಲೀಸರು ನಿತ್ಯವೂ ಮೈದಾನದಲ್ಲಿ ತರಬೇತಿಯನ್ನು ನಡೆಸುವುದರಿಂದ ಹಾಗೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮೈದಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಡಿಆರ್ ಪಡೆಯ ಮೈದಾನದಲ್ಲಿ ಸುತ್ತಲೂ ಮರಗಿಡಗಳು ಇದ್ದು, ಮತ್ತಷ್ಟು ಗಿಡಮರಗಳನ್ನು ಬೆಳೆಸುವ ಮೂಲಕ ಹಸಿರು ಮೈದಾನವನ್ನಾಗಿ ಮಾಡುವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಜಿಲ್ಲಾ ಶಸಸ ಮೀಸಲು ಪಡೆಯ ಪೆರೇಡ್ ಮೈದಾನದಲ್ಲಿ ಸುಮಾರು 27 ಅಡಿ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಬಹುಶಃ ರಾಜ್ಯದಲ್ಲೇ ಇಷ್ಟು ಎತ್ತರದ ಪೊಲೀಸ್ ಸ್ಮಾರಕ ಎಲ್ಲೂ ಇಲ್ಲ ಎನಿಸುತ್ತದೆ. ಅ.21 ರಂದು ನಡೆಯಲಿರುವ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗುತ್ತದೆ.

-ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ