ಜಿಲ್ಲೆ

ರಾಜ್ಯದಲ್ಲೂ ಕೋವಿಡ್ ವೇಗವಾಗಿ ಹರಡಬಹುದು


ಚಿತ್ರದುರ್ಗ: ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸ್‌ಟೇಟರ್ ಮತ್ತಿತರ ಚಿಕಿತ್ಸಾ ಉಪಕರಣಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ 24 ತಾಸಿನೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಅವರಿಗೆ ಸೂಚಿಸಿದರು.
ಕೋವಿಡ್ ಜೆಎನ್ 1 ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಿಎಸ್‌ಆರ್ ನಿಧಿಯಡಿ ಸ್ಥಾಪಿಸಿರುವ ಆಕ್ಸಿಜನ್ ಘಟಕಗಳು ಆಸ್ಪತ್ರೆಗಳಿಗೆ ಹಸ್ತಾಂತರವಾಗಿಲ್ಲ. ಕೆಲವೆಡೆ ಸ್ಥಾಪನೆ, ಸಂಪರ್ಕ ಕಾರ್ಯ ಪೂರ್ಣಗೊಂಡಿಲ್ಲವೆಂಬ ಮಾಹಿತಿಗೆ ಆಕ್ರೋಶ ವ್ಯಕ್ತಪಡಿಸಿ, ಪ್ಲಾಂಟ್‌ಗಳನ್ನು ಖುದ್ದು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಬಳಸದ ಪರಿಣಾಮ ವೆಂಟಿಲೇಟರ್‌ಗಳ ಸೆನ್ಸಾರ್ ಹಾಳಾಗುತ್ತಿದೆ ಎಂದು ವೈದ್ಯಾಧಿಕಾರಿಗಳ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಕೂಡಲೇ ಸೆನ್ಸಾರ್‌ಗಳನ್ನು ಖರೀದಿಸಿ, ವೆಂಟಿಲೇಟರ್‌ಗಳ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಹೇಳಿದರು.
ಕೇರಳದಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್ ರಾಜ್ಯದಲ್ಲೂ ವ್ಯಾಪಕವಾಗುವ ಸಾಧ್ಯತೆಗಳಿವೆ. ಉದಾಸೀನ ಬೇಡವೆಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಚುನಾವಣೆ ತರಬೇತಿಯಲ್ಲಿರುವ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರೊಂದಿಗೆ ಆನ್‌ಲೈನ್ ಮೀಟಿಂಗ್ ಮೂಲಕ ಚರ್ಚೆ ನಡೆಸಿದ ಸಚಿವರು, ವಿಶೇಷ ಕಾರ್ಯ ಯೋಜನೆ ರೂಪಿಸಬೇಕು. ಜ್ವರ ಪ್ರಕರಣಗಳ ಸೇರಿ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಬೇಕು. ಹಿಂದೆ ನಮ್ಮ ರಾಜ್ಯದಲ್ಲಿ ಸೋಂಕು ನಿಧಾನವಾಗಿದ್ದರೂ ನಂತರದಲ್ಲಿ ವೇಗವಾಗಿ ಹರಡಿತ್ತು. ಆದ್ದರಿಂದ ಪ್ರತ್ಯೇಕ ವಾರ್ಡ್‌ಗಳು, ಐಸಿಯು, ಬೆಡ್‌ಗಳು, ವೆಂಟಿಲೇಟರ್‌ಗಳು, ಆಕ್ಸಿಜನ್ ವ್ಯವಸ್ಥೆ ಹಾಗೂ ಅಗತ್ಯ ಔಷಧ, ಉಪಕರಣಗಳೊಂದಿಗೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ನಿರ್ವಹಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಆಸ್ಪತ್ರೆ ಸಂತೆಯಾಗಿದೆ. ಸ್ವಚ್ಛತೆ ಕೊರತೆ ಇದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೋವಿಡ್ ನಿರ್ವಹಣೆ ಕಷ್ಟವೆಂದು ಡಿಎಸ್ ಡಾ.ಎಸ್.ಪಿ.ರವೀಂದ್ರ ಅವರನ್ನು ಎಚ್ಚರಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

*ಟೆಸ್ಟ್‌ಗಳ ವರದಿ ನೆಗೆಟಿವ್
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆಂದು 660, ಖಾಸಗಿ ಆಸ್ಪತ್ರೆಗಳಲ್ಲಿ 800 ಬೆಡ್‌ಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ 62 ವೆಂಟಿಲೇಟರ್‌ಗಳಲ್ಲಿ 23 ಕಾರ್ಯನಿರ್ವಹಿಸುತ್ತಿವೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು. 303 ಆಕ್ಸಿಜನ್ ಕಾನ್ಸೆನ್‌ಟ್ರೇಟರ್ಸ್‌, 606 ಆಕ್ಸಿಜನ್ ಸಿಲಿಂಡರ್‌ಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 500, 300 ಹಾಗೂ 1000 ಎಲ್‌ಎಂಪಿ, ಹೊಸದುರ್ಗ 500 ಹಾಗೂ ಹಿರಿಯೂರು 250 ಎಲ್‌ಎಂಪಿ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್‌ಗಳು ಸ್ಥಾಪನೆಯಾಗಿವೆ. ಮೊಳಕಾಲ್ಮೂರು, ಚಳ್ಳಕೆರೆ, ಹೊಳಲ್ಕೆರೆಯಲ್ಲಿ ಪೂರ್ಣಗೊಂಡಿಲ್ಲ. ಈವರೆಗೆ ನಡೆಸಿದ 73 ಕೋವಿಡ್ ಟೆಸ್ಟ್‌ಗಳ ವರದಿ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ಶಬರಿಮಲೆ ಭಕ್ತರಲ್ಲಿ ಮನವಿ
ಚಿತ್ರದುರ್ಗ: ಕೇರಳದಲ್ಲಿ ಕೋವಿಡ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆಗೆ ಹೋಗಿಬರುವಂಥ ಕರ್ನಾಟಕ ಭಕ್ತರು, ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಕೆಲ ದಿನಗಳ ಮನೆಯಲ್ಲೇ ಪ್ರತ್ಯೇಕವಾಗಿರ ಬೇಕೆಂದು ಎಂಎಲ್ಸಿ ಕೆ.ಎಸ್.ನವೀನ್ ಮನವಿ ಮಾಡಿದ್ದಾರೆ.
====