ಜಿಲ್ಲೆ

ರಾಜ್ಯದಲ್ಲಿ ಸಾಕಷ್ಟಿದೆ ಹೊರಬರುವ ಮಾಹಿತಿ

ಧಾರವಾಡ: ಸದ್ಯ ರಾಜ್ಯದಲ್ಲಿ ಸದ್ದು ಮಾಡಿರುವ ಡ್ರಗ್ಸ್ ಪ್ರಕರಣ ಮಂಜುಗಡ್ಡೆಯ ಒಂದು ಸಣ್ಣ ತುಣುಕು ಇದ್ದಂತೆ ಎಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ಹೊರ ಬರಬೇಕಿರುವುದು ಇನ್ನೂ ಬೆಟ್ಟದಷ್ಟಿದೆ ಎನ್ನುವ ಸುಳಿವನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಭಾಸ್ಕರ್​ರಾವ್ ನೀಡಿದ್ದಾರೆ.

ನಗರದಲ್ಲಿನ ತಮ್ಮ ಇಲಾಖೆ ಅಧೀನದ ಕಮಾಂಡೆಂಟ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೆಮಿಕಲ್ಸ್ ಹಾಗೂ ಆರ್ಟಿಫಿಶಿಯಲ್ ಡ್ರಗ್ಸ್ ತಡೆಯುವುದು ಸವಾಲಿನ ಕೆಲಸವಾಗಿದೆ. ಈ ಡ್ರಗ್ಸ್ ವಿದೇಶದಿಂದ ಆಗಮಿಸುತ್ತಿರುವುದರಿಂದ ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ನೀಡಬೇಕಿದೆ. ಇದಲ್ಲದೆ ವಿದೇಶದಿಂದ ಆಗಮಿಸಿದ ಬಳಿಕ ರಾಜ್ಯದಲ್ಲಿ ಯಾರ ಮೂಲಕ ಸರಬರಾಜು ಮಾಡಲಾಗುತ್ತದೆ ಎಂಬುದನ್ನೂ ಪತ್ತೆ ಹಚ್ಚುವ ಕೆಲಸ ನಡೆಯಬೇಕಿದೆ ಎಂದರು.

ಈ ಹಿಂದೆ ಭಯೋತ್ಪಾದನೆ ಪ್ರಕರಣದಲ್ಲಿ ಸಿಲುಕಿ, ಸಮಾಜದಲ್ಲಿ ಜೀವನ ನಡೆಸುತ್ತಿರುವ ಜನರ ಮೇಲೆ ಸಹ ಹದ್ದಿನ ಕಣ್ಣು ಇಡಬೇಕಿದೆ. ಪ್ರಕರಣದಿಂದ ಹೊರ ಬಂದಿದ್ದರೂ ಮತ್ತೆ ಅವರು ಭಯೋತ್ಪಾದನೆ ಕೆಲಸದಲ್ಲಿ ತೊಡಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂತಹ ಜನರ ಮೇಲೆ ಕಣ್ಣಿಡುವುದು ಅತ್ಯಂತ ಮುಖ್ಯವಾಗಿದೆ ಎಂದರು.

ರಾಜ್ಯದಲ್ಲಿನ 8 ವಿಮಾನ ನಿಲ್ದಾಣಗಳ ಪೈಕಿ 6ರ ಭದ್ರತೆಯನ್ನು ಇಲಾಖೆ ನೋಡಿಕೊಳ್ಳುತ್ತಿದೆ. ಈ ನಿಲ್ದಾಣಗಳಲ್ಲಿ ಭದ್ರತೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಬಲಪಡಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿ ನಡೆಸುವ ಅಪರಾಧ ಕೃತ್ಯಗಳ ಕುರಿತು ಸಿಬ್ಬಂದಿಗೆ ತರಬೇತಿ ನೀಡಬೇಕಿದೆ. ಆ ಕೆಲಸವನ್ನೂ ಕೆಲ ದಿನಗಳಲ್ಲಿ ಮಾಡಲಾಗುವುದು ಎಂದರು.

ಸಿಬ್ಬಂದಿ ಕೊರತೆ ಎಲ್ಲ ಇಲಾಖೆಗಳಲ್ಲೂ ಇದೆ. ಈ ಕೊರತೆಯನ್ನು ತಂತ್ರಜ್ಞಾನ ಬಳಕೆ ಹಾಗೂ ಹೋಂ ಗಾರ್ಡ್​ಗಳ ಮೂಲಕ ನೀಗಿಸಬಹುದು. ಪೊಲೀಸ್ ತರಬೇತಿಯಲ್ಲಿ ಹೊಸ ಹೊಸ ಮಾದರಿಗಳನ್ನು ಸಹ ಅಳವಡಿಸಬೇಕಿದೆ. ಇದರಿಂದ ಇಲಾಖೆಗೆ ಮತ್ತಷ್ಟು ಬಲ ಸಿಗುವ ಜತೆಗೆ, ಸಿಬ್ಬಂದಿಯಲ್ಲಿ ಹೆಚ್ಚಿನ ಆತ್ಮ ವಿಶ್ವಾಸ ಮೂಡಲಿದೆ ಎಂದರು.

ವಿಮಾನ ನಿಲ್ದಾಣ ಪರಿಶೀಲನೆ

ಹುಬ್ಬಳ್ಳಿ: ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ)ದ ಎಡಿಜಪಿ ಭಾಸ್ಕರರಾವ್ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಮಾನ ನಿಲ್ದಾಣದ ರನ್​ವೇ, ಟರ್ವಿುನಲ್, ಕಾಂಪೌಂಡ್ ಸುತ್ತ ಭದ್ರತೆ ಕುರಿತು ಪರಿಶೀಲಿಸಿದರು. ನಂತರ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಪೊಲೀಸ್ ಆಯುಕ್ತ ಆರ್. ದಿಲೀಪ, ಡಿಸಿಪಿ ಪಿ. ಕೃಷ್ಣಕಾಂತ ಹಾಗೂ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳೊಂದಿಗೆ ರ್ಚಚಿಸಿದರು. ಭದ್ರತಾ ವಿಭಾಗದ ಇನ್ಸ್​ಪೆಕ್ಟರ್​ಗಳಾದ ಜಗದೀಶ ಹಂಚಿನಾಳ, ಶಿವರಾಜ ಪಾಟೀಲ, ಮಹೇಶ ಹುದ್ದಾರ, ಇತರರು ಇದ್ದರು.