ಜಿಲ್ಲೆ

ರಾಜ್ಯದಲ್ಲಿ ಸವಾಲುಗಳು ಜೀವಂತ

ಚಿತ್ರದುರ್ಗ: ಸಾಮರಸ್ಯದೊಂದಿಗೆ ದೇಶ, ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಾತೃ ಭಾಷೆ, ತಾಯಿ ಮೇಲೆ ಪ್ರೀತಿ, ವಾತ್ಸಲ್ಯ ಹೆಚ್ಚಿಸಿಕೊಂಡರೆ ನಾಡು ಪ್ರಕಾಶಮಾನವಾಗಲಿದೆ ಎಂದರು.
ಏಳು ದಶಕಗಳಾದರೂ ನಾಡು-ನುಡಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಹಾಗೇ ಉಳಿದಿವೆ, ಕೆಲವು ಹೆಚ್ಚು ಗಂಭೀರವಾಗುತ್ತಿವೆ. ಗಡಿ, ನೀರು ಹಂಚಿಕೆ ವಿವಾದಗಳು, ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಆದ್ಯತೆ, ಮಾತೃಭಾಷೆಯಲ್ಲಿ ಶಿಕ್ಷಣ ಮೊದಲಾದ ಸವಾಲುಗಳು ಇದ್ದು, ಅವುಗಳನ್ನು ಸಂಘಟಿತವಾಗಿ ಎದುರಿಸೋಣ ಎಂದು ಹೇಳಿದರು.
ರಾಜ್ಯದ ಏಕೀಕರಣಕ್ಕೆ ದುಡಿದ ದಿವ್ಯ ಚೇತನರು ಹಾಗೂ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿದ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಕಡೆಗಿದ್ದ ಭಾವನಾತ್ಮಕ ಪ್ರೇರಣೆಯನ್ನು ನೆನಪಿಸಿ ಕೊಳ್ಳಬೇಕಿದೆ ಎಂದರು.
ಸಂಘಟಿತ ಪ್ರಯತ್ನಗಳಿಂದಾಗಿ ನಾವಿಂದು ಸ್ವಾಭಿಮಾನಿ ಕನ್ನಡಿಗರಾಗಿದ್ದೇವೆ. ರಾಜ್ಯ ಸರ್ವ ಸಮುದಾಯದ ಶಾಂತಿ ತೋಟವಾಗಿದೆ. ಬಸವಾದಿ ಶರಣರು ಕಟ್ಟಿದ ಕಲ್ಯಾಣ ರಾಜ್ಯದ ವಾರಸುದಾರರಾಗಿದ್ದೇವೆ. ಸಂವಿಧಾನದ ಆಶಯಗಳೊಂದಿಗೆ ನಾಡು, ದೇಶವನ್ನು ವಿಶ್ವಕ್ಕೆ ಮಾದರಿ ಎಂಬಂತೆ ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.
ರಾಜ್ಯ ಅಭಿವೃದ್ಧಿ ಹಾದಿಯಲ್ಲಿ ಮುಂದುವರಿದಿದೆ. ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳ್ಳುವ ದಿನಗಳು ಸಮೀಪದಲ್ಲಿವೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಅಹಿಂದ ಹಾಗೂ ಮಹಿಳೆಯರು, ಅಂಗವಿಕಲರಿಗೆ ಉದ್ಯೋಗಾವಕಾಶ ಒದಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ನಮ್ಮ ಯುವ ಪ್ರತಿಭೆಗಳಿಂದು ಜಗತ್ತಿನಾದ್ಯಂತ ಕನ್ನಡ ಜ್ಯೋತಿ ಹಚ್ಚುತ್ತಿದ್ದಾರೆ. ಸದಭಿರುಚಿ ಪ್ರೇರಣೆಗಳು ಉತ್ತಮ ಬದುಕನ್ನು ಕಟ್ಟಿ ಕೊಡಬಲ್ಲವು, ಅದಕ್ಕಾಗಿ ಅಗತ್ಯ ಶಿಕ್ಷಣ, ಸಾಹಿತ್ಯ, ಕಲೆ, ಕೌಶಲಗಳ ಅನುಷ್ಠಾನಕ್ಕಾಗಿ ಸಾಮೂಹಿಕ ಪ್ರಯತ್ನಗಳು ಆಗಬೇಕಿದೆ ಎಂದು ತಿಳಿಸಿದರು.

ಧೀಮಂತರ ನಾಡು
ಚಿತ್ರದುರ್ಗ,ಕನ್ನಡದ ಮೊದಲ ಸಾಮ್ರಾಜ್ಯವನ್ನು ಕಟ್ಟಿದ್ದ ಕದಂಬ ವಂಶದ ದೊರೆ ಮಯೂರ ಶರ್ಮನ ಸೇನಾ ಸಂಘಟನೆಗೆ ಸ್ಥಾವರವಾ ಗಿದ್ದ ಗಂಡು ಮೆಟ್ಟಿದ ನಾಡೆಂದು ಸಚಿವ ಡಿ.ಸುಧಾಕರ್ ಹೇಳಿದರು.
ಅರಮನೆ-ಗುರುಮನೆ ಸಂಬಂಧದ ನೆಲೆಯಲ್ಲಿ ರಾಜ್ಯಾಡಳಿತಕ್ಕೆ ಮಾರ್ಗದರ್ಶನ ನೀಡುತ್ತಿರುವ ಮಠ-ಪೀಠಗಳ ಸಂತರ ಕೋಟೆ ನಾಡಿ ದು. ಕುವೆಂಪು ಅವರ ಗುರು ತಳುಕಿನ ವೆಂಕಣ್ಣಯಯ್ಯ ಅವರು, ಏಕೀಕರಣದ ಕಟ್ಟಾಳು,ಏಕೀಕೃತ ರಾಜ್ಯದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು, ಸಾಮಾಜಿಕ ಅಸಮಾನತೆ ಕುರಿತು ಅಧ್ಯಯನ ವರದಿ ನೀಡಿದ ಡಿ.ಎಂ.ನಂಜುಂಡಪ್ಪ ಅವರಂಥ ಧೀಮಂತ ತಜ್ಞರು ಜನಿಸಿದ ಜಿಲ್ಲೆ ಚಿತ್ರದುರ್ಗವೆಂದರು.

ಜ್ಞಾನಭಾರತಿ ಶಾಲೆ ಹಾಗೂ ಸಂತ ಜೋಸೆಫ್ ಶಾಲೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳ 28 ಸಾಧಕರನ್ನು ಸಚಿವರು ಸನ್ಮಾನಿಸಿದರು.
ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಎಲ್ಲಾದರು ಇರು ಎಂತಾದರೂ ಇರು, ದ.ರಾ.ಬೇಂದ್ರೆ ಅವರ ಒಂದೆ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕರ ಹೊತ್ತಿತೋ ಹೊತ್ತಿತು ಕನ್ನಡದ ದೀಪ ಹಾಗೂ ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಗೀತೆಗಳ ಗಾಯನವನ್ನು ಕಲಾವಿದರು ಪ್ರಸ್ತುತ ಪಡಿಸಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು, ಎಸ್‌ಪಿ ಧರ್ಮೇಂದ್ರಕುಮಾರ್ ಮೀನಾ, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ತಹಸೀಲ್ದಾರ್ ಡಾ.ನಾಗವೇಣಿ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಗರಸಭೆ ಆಯುಕ್ತೆ ಎಂ.ರೇಣುಕಾ, ಮೋಕ್ಷಾ ರುದ್ರಸ್ವಾಮಿ, ಟಿಪ್ಪು ಖಾಸೀಂ ಆಲಿ ಇತರರಿದ್ದರು. ಶಿವರಾಂ ಹಾಗೂ ಕೆಪಿಎಂ ಗಣೇಶಯ್ಯ ಕಾರ್ಯಕ್ರಮದ ನಿರೂಪಿಸಿದರು.

ಭುವನೇಶ್ವರಿ ದೇವಿ ಅದ್ದೂರಿ ಮೆರವಣಿಗೆ
ಜಿಲ್ಲಾಡಳಿತ ನಗರದಲ್ಲಿ ಬುಧವಾರ ಆಯೋಜಿಸಿದ್ದ ತಾಯಿ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
ನೀಲಕಂಠೇಶ್ವರ ದೇವಾಲಯದ ಬಳಿ ಮೆರವಣಿಗೆಗೆ ಜಿಲ್ಲಾಧಿಕಾರಿ ದಿವ್ಯಾಪ್ರಭು ಚಾಲನೆ ನೀಡಿದರು. ಪೂರ್ಣಕುಂಭದೊಂದಿಗೆ ಮಹಿಳೆಯರು, ವಿದ್ಯಾರ್ಥಿಗಳು, ಕಹಳೆ, ಡೋಲು ಮತ್ತಿತರ ಕಲಾ ತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಗಮನಸೆಳೆದವು. ಗಾಂಧಿ ವೃತ್ತ, ಎಸ್‌ಬಿಎಂ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಮೆರವಣಿಗೆ ಪೊಲೀಸ್ ಕವಾಯಿತು ಮೈದಾನ ತಲುಪಿತು.
ಶಿಕ್ಷಣ ಇಲಾಖೆಯ ಚಂದ್ರಯಾನ, ಸಾರಿಗೆ ಇಲಾಖೆಯ ಶಕ್ತಿ ಯೋಜನೆ ಹಾಗೂ ಅರಣ ಇಲಾಖೆಯ ವನ್ಯಜೀವಿ ಸಂರಕ್ಷಣೆ ಮಹತ್ವ ಸಾರುವ ಸ್ತಬ್ಧ ಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.
ಚಂದ್ರಯಾನ, ಶಿಕ್ಷಣದ ಶಕ್ತಿ ಸಾರುವ ಯೋಜನೆಗಳ ಬಗ್ಗೆ ಶಿಕ್ಷಣ ಇಲಾಖೆ ಸ್ತಬ್ಧಚಿತ್ರ. ಪ್ರವಾಸೋದ್ಯಮ ಇಲಾಖೆ ನಾರಿಶಕ್ತಿ ಸ್ತಬ್ಧಚಿತ್ರ ಗಮನ ಸೆಳೆಯಿತು. ಶರಣೆ ಅಕ್ಕಮಹಾದೇವಿ, ವೀರ ವನಿತೆ ಒನಕೆ ಓಬವ್ವ, ರಾಷ್ಟ್ರಪತಿ ದ್ರೌಪದಿಮುರ್ಮು, ಸಾಲುಮರದ ತಿಮ್ಮಕ್ಕ, ಬಾಹ್ಯಾಕಾಶಯಾತ್ರಿ ಕಲ್ಪನಾ ಚಾವ್ಲಾ, ಒಲಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಮೇರಿಕೋಮ್ ಅವರ ಭಾವಚಿತ್ರಗಳು ಕಂಗೊಳಿಸಿದವು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸ್ತಬ್ಧ ಚಿತ್ರ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಎಚ್ಚರಿಸಿತು. ಬೆಸ್ಕಾಂನ ಗೃಹಜ್ಯೋತಿ, ಆರೋಗ್ಯ ಇಲಾಖೆ ತಾಯಿ ಹಾಲಿನ ಮಹತ್ವ ಸಾರುವ ಹಾಗೂ ಅರಣ್ಯ, ಕೃಷಿ, ಅಬಕಾರಿ ಇಲಾಖೆ, ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ತಬ್ಧಚಿತ್ರಗಳು ವಿವಿಧ ಯೋಜನೆಗಳೆಡೆ ಜಾಗೃತಿ ಮೂಡಿಸಿದವು.
ಡಿಡಿಪಿಐ ರವಿಶಂಕರ್‌ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಕೇಂದ್ರದಲ್ಲಿ 28 ಮಂದಿಗೆ ಸನ್ಮಾನ
ವಿವಿಧ ಕ್ಷೇತ್ರಗಳ 28 ಜನ ಸಾಧಕರನ್ನು ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಸನ್ಮಾನಿಸಿದರು. ಕ್ರೀಡೆ- ವರ್ಷಾ, ಶ್ರೇಯಾ, ರವಿ ಅಂಬೇಕರ್. ಕೃಷಿ-ಡಾ.ಆರ್.ಎ.ದಯಾನಂದಮೂರ್ತಿ, ಕೆ.ಸಿ.ಹೊರಕೇರಪ್ಪ. ಚಿತ್ರಕಲೆ-ಮೋಹನ ಮುರಳಿ, ಟಿ.ಎಂ.ವೀರೇಶ್. ಭೂವಿಜ್ಞಾನ-ಜಿ.ಪರಶುರಾಮ, ಸಂಶೋಧನೆ-ಡಾ.ಆರ್.ಎಸ್.ದೀಪಕ್. ವೈದ್ಯಕೀಯ- ಡಾ.ಪಿ.ವಿ.ಶ್ರೀಧರಮೂರ್ತಿ, ಡಾ.ಬಿ.ಚಂದ್ರನಾಯ್ಕ. ಶಿಕ್ಷಣ-ಹನುಮಂತಪ್ಪ, ಜಿ.ಎಸ್.ವಸಂತ. ಸಾಮಾಜಿಕ ಸೇವೆ- ಡಾ.ಕೆ.ಸೌಮ್ಯಾ, ವೀಣಾ ಗೌರಣ್ಣ. ಸಾಹಿತ್ಯ-ಪ್ರೊ.ಜಿ.ಪರಮೇಶ್ವರಪ್ಪ ಕಪಿಲೆ, ಬಾಗೂರು ಆರ್.ನಾಗರಾಜಪ್ಪ. ರಂಗಭೂಮಿ-ಎಸ್.ಡಿ.ರಾಮಸ್ವಾಮಿ, ಡಿ.ಶ್ರೀಕುಮಾರ್. ಸಂಗೀತ-ಶೈಲಜಾ ಸುದರ್ಶನ್, ಡಿ.ಒ.ಮುರಾರ್ಜಿ, ಜಾನಪದ-ಜಿ.ರಾಜಣ್ಣ, ಶ್ರೀನಿವಾಸ. ಪತ್ರಿಕೋದ್ಯಮ-ಎಚ್.ಲಕ್ಷ್ಮ್ಮಣ್, ರವಿ ಮಲ್ಲಾಪುರ, ವಿ.ವೀರೇಶ್. ಮಾಧ್ಯಮ ಛಾಯಾಗ್ರಹಣ-ಮಂಜುನಾಥ್, ದ್ವಾರಕನಾಥ್.