ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ತಾಳಿಕೋಟೆ ಪಟ್ಟಣದಲ್ಲಿ ವಿವಿಧ ಹಿಂದು ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ಮಾಡಲಾಯಿತು. ಆರ್.ಎಸ್.ಪಾಟೀಲ ಕೂಚಬಾಳ, ಸೋಮಲಿಂಗ ಸ್ವಾಮಿಗಳು, ಸದಾಶಿವಯ್ಯ ಅರಕೇರಿಮಠ ಇತರರಿದ್ದರು. 
ಜಿಲ್ಲೆ

ರಾಜ್ಯದಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲಿ

ತಾಳಿಕೋಟೆ: ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ತಾಳಿಕೋಟೆ ಪಟ್ಟಣದಲ್ಲಿ ವಿವಿಧ ಹಿಂದು ಪರ ಸಂಘಟನೆಗಳ ನೇತೃತ್ವವಲ್ಲಿ ಶನಿವಾರ ರಸ್ತೆ ತಡೆ ಚಳವಳಿ ನಡೆಸಿ ಪ್ರತಿಭಟನೆ ಮಾಡಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ವಾಹನ ಸಂಚಾರವನ್ನು ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ವಿದ್ಯಾರ್ಥಿನಿ ಕಾಲೇಜಿಗೆ ಹೋದವಳು ಜೀವಂತವಾಗಿ ಮನೆಗೆ ಬಂದಿಲ್ಲವೆಂದರೆ ನಮ್ಮ ರಾಜ್ಯದಲ್ಲಿಯ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ತೋರಿಸುತ್ತದೆ. ಗೃಹಮಂತ್ರಿ ಪರಮೇಶ್ವರರಿಗೆ ನಾಚಿಗೆ ಬರಬೇಕು. ವೈಯಕ್ತಿಕ ಕಾರಣಕ್ಕಾಗಿ ಘಟನೆ ನಡೆದಿದೆ ಎಂದು ಆ ಕುಟುಂಬದ ಮಾನವನ್ನು ಹರಾಜು ಹಾಕಲಿಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು.

ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು, ಬೇಡ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷ ಸದಾಶಿವಯ್ಯ ಅರಕೇರಿಮಠ, ಚಬನೂರಿನ ರಾಮಲಿಂಗಯ್ಯ ಶ್ರೀಗಳು, ನಾವದಗಿ ರಾಜೇಂದ್ರ ಒಡೆಯರ ಸ್ವಾಮಿಗಳು, ರಾಘವೇಂದ್ರ ಬಿಜಾಪೂರ, ಕಾಶಿನಾಥ ಅರಳಿಚಂಡಿ, ವಿಜಯಲಕ್ಷ್ಮೀ ಹಿರೇಮಠ, ಸುವರ್ಣಾ ಬಿರಾದಾರ ಮಾತನಾಡಿದರು.

ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ವೃತ್ತ, ಕತ್ರಿ ಬಜಾರ್, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಅಲ್ಲಿ ಕೆಲ ಹೊತ್ತು ಧರಣಿ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಲಾಯಿತು. ಭಂಟನೂರ ಕಾಶಿಬಾಯಿ ಅಮ್ಮನವರು, ಇಂಗಳೇಶ್ವರ ಶರಣ್ಣಮ್ಮನವರು ಸೇರಿ ಹಿಂದು ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಇದ್ದರು.