ಜಿಲ್ಲೆ

ರಾಜ್ಯದಲ್ಲಿ ಸಂಪೂರ್ಣ ಬಲಗಾಲ ಘೋಷಣೆಗೆ ರೈತ ಸಂಘ ಒತ್ತಾಯ

ಹಾಸನ: ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವುದು, ರಾಜ್ಯವನ್ನು ಬಲಗಾಲ ಘೋಷಣೆ, ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಜಿಲ್ಲೆ ಮಳೆ ಕೊರತೆಯಿಂದ ಆಲೂಗಡ್ಡೆ, ಜೋಳ, ಶುಂಠಿ, ಭತ್ತ, ತೋಟಗಾರಿಕೆ ಬೆಳಗಳು ಒಣಗುತ್ತಿವೆ. ಬಿತ್ತನೆ ಮಾಡಿದ ಖರ್ಚು ರೈತರ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ 8 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕ್ವಿಂಟಾಲ್‌ಗೆ 18 ಸಾವಿರರೂ. ಇದ್ದ ಕೊಬ್ಬರಿ ಬೆಲೆ ಕಳೆದ 8 ತಿಂಗಳಿಂದ ಸತತವಾಗಿ ಕುಸಿದು 7500ರೂ.ಗೆ ಕೊಬ್ಬರಿ ಖರೀದಿಯಾಗುತ್ತಿದೆ. ಕೇಂದ್ರ ಸರ್ಕಾರ ಸೂಚನೆಯಂತೆ ಬೆಂಬಲ ಬೆಲೆಯಲ್ಲಿ ನಫೆಡ್ ಈ ಹಿಂದೆ ಕೊಬ್ಬರಿ ಖರೀದಿಸುತ್ತಿತ್ತು. ಈಗ ಖರೀದಿಯನ್ನು ನಿಲ್ಲಿಸಿದೆ. ಆದ್ದರಿಂದ ಕೊಬ್ಬರಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ವೈಜ್ಞಾನಿಕ ವರದಿ ಆದರಿಸಿ ಪರಿಹಾರ ಕೇಳಿ:

ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುವಾಗ ರೈತ ಸಂಘಟನೆಗಳ ಎಲ್ಲಿ ಹೋಗಿದ್ದವು ಎಂಬ ಡಿ.ಕೆ.ಶಿವಕುಮಾರ್ ಅಂಸಬಂದ್ಧವಾದ ಹೇಳಿಕೆ. ಅದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಅವರ ಪಕ್ಷದ ಕಾರ್ಯಕ್ರಮವಾಗಿ ಮಾಡುವಾಗ ಬೇರೆಯವರು ಹೇಗೆ ಬೆಂಬಲ ಕೊಡಲು ಆಗುತ್ತೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ಹಾಸನ ಜಿಲ್ಲೆ ಸೇರಿ ರಾಜ್ಯವನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಬೇಕು. ರಾಜ್ಯ ಸರ್ಕಾರ ಬರಘೋಷಣೆ ನಿಯಮಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಅವರ ಬಳಿ ಕೇಳಲು ಯಾವ ಮಾನದಂಡವಿದೆ ನಿಮ್ಮ ಬಳಿ ಇದೆ. ಯಾವುದೋ 70ರ ದಶಕದ ಮಾನದಂಡಗಳನ್ನು ಇಟ್ಟುಕೊಂಡು ಮಾತನಾಡುವುದು ಬೇಡ, 2023ಕ್ಕೆ ಒಬ್ಬ ರೈತನ ಬೆಳೆ, ಮನೆ ನಷ್ಟವಾದರೆ ಎಷ್ಟು ಪರಿಹಾರ ಕೊಡಬೇಕು ಎಂಬ ವೈಜ್ಞಾನಿಕ ವರದಿ ನಿಮ್ಮ ಕೈಯಲ್ಲಿಟ್ಟುಕೊಂಡು ಆ ವಿಚಾರದ ಮೇಲೆ ಕೇಂದ್ರ ಸರ್ಕಾರವನ್ನು ಕೇಳಬೇಕು. ಅದಕ್ಕಾಗಿ ಮಾನದಂಡ ಬದಲಾವಣೆ ಮಾಡಬೇಕು. ನಾಡಿನ ರೈತರ ಸಂಕಷ್ಟಕ್ಕೆಂದು ವಿಪತ್ತು ನಿಧಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.

ನೀವು ಅಧಿಕಾರಕ್ಕೋಸ್ಕರ ಆಡಳಿತದಲ್ಲಿದ್ದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೀರಿ, ಈಗ ನಿಮಗೆ ನಾಡಿನ ಜನ ಅಧಿಕಾರ ಕೊಟ್ಟಿದ್ದಾರೆ. ನಿಮ್ಮ ಬದ್ಧತೆಯನ್ನು ತೋರಿಸಬೇಕಿತ್ತು, ಬದ್ಧತೆ ತೋರುವಲ್ಲಿ ವಿಫಲರಾಗಿದ್ದೀರಿ. ಸಿದ್ದರಾಮಯ್ಯ ಅವರ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿದ್ದರೆ ಯಾವುದೇ ಅನಾಹುತ ಆಗುತ್ತಿರಲಿಲ್ಲ, ಬಂಗಾರಪ್ಪ ಅವರು ನೀರು ನಿಲ್ಲಿಸಿದಾಗ ಅವರನ್ನು ಜೈಲಿಗೆ ಹಾಕಲಿಲ್ಲ. ಈಗ ನೀವು ತಪ್ಪು ಮಾಡಿದ್ದೀರಾ ಕೂಡಲೇ ನೀರು ನಿಲ್ಲಿಸಿ ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಜಯರಾಮ್, ಕಮಲಮ್ಮ, ರಂಗಮ್ಮ ಮತ್ತಿತರು ಹಾಜರಿದ್ದರು.