ಜಿಲ್ಲೆ

ರಾಜ್ಯದಲ್ಲಿ ಸಂಪೂರ್ಣ ಗೋ ಹತ್ಯೆ ನಿಷೇಧಿಸಿ

ಬೀದರ್: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸುವ ಸಂಬಂಧ ಈ ತಿಂಗಳ 21ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು ಎಂದು ಭಾರತೀಯ ಗೋ ಪರಿವಾರ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಮದಾಪುರ ಆಗ್ರಹಿಸಿದ್ದಾರೆ.

ಶ್ರೀ ರಾಮಚಂದ್ರಾಪುರ ಮಠದಿಂದ ಚಾಲಿತವಾದ ಭಾರತೀಯ ಗೋಪರಿವಾರ ವತಿಯಿಂದ ಈಗಾಗಲೇ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಅವರಿಗೆ ಸಲ್ಲಿಸಲಾಗಿದ್ದು, ಬೀದರ್ ಜಿಲ್ಲೆಯಿಂದಲೂ ಹತ್ತು ಲಕ್ಷಕ್ಕೂ ಅಧಿಕ ಹಕ್ಕೊತ್ತಾಯ ಪತ್ರಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷಭೇದ, ಧರ್ಮಭೇದ ಮರೆತು ಅಭಯಾಕ್ಷರ ಅಭಿಯಾನದಡಿ ರಾಜ್ಯದ ಒಂದು ಕೋಟಿಗೂ ಅಧಿಕ ಗೋಪ್ರೇಮಿಗಳು ಹಕ್ಕೊತ್ತಾಯ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿದ್ದು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ, ಜನರ ಈ ಒಕ್ಕೊರಲ ಆಗ್ರಹಕ್ಕೆ ಸ್ಪಂದಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸದನದ ಒಳಗೆ ಹಾಗೂ ಸದನದ ಹೊರಗೆ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ನಾಡಿನ ವಿವಿಧ ಮಠಾಧೀಶರು, ಧರ್ಮಗುರುಗಳು, ಸೆಲೆಬ್ರಿಟಿಗಳು, ಶಿಕ್ಷಣ ತಜ್ಞರು ಸೇರಿದಂತೆ ಸಮಾಜದ ಎಲ್ಲ ಸ್ತರಗಳ ಗಣ್ಯರು ಹಕ್ಕೊತ್ತಾಯ ಮಂಡಿಸಿದ್ದು, ಸರ್ಕಾರ ಇನ್ನು ವಿಳಂಬ ಮಾಡದೇ ಬರುವ ಅಧಿವೇಶನದಲ್ಲೇ ಗೋಹತ್ಯೆ ನಿಷೇಧದ ಮಸೂದೆ ಆಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಭಾರತೀಯ ಗೋ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು ಮತ್ತು ಭಾರತೀಯ ಗೋ ತಳಿಗಳನ್ನು ಸಾಕುವ ರೈತರಿಗೆ ರಾಜ್ಯ ಸರ್ಕಾರ ವಿಶೇಷ ನೆರವು ನೀಡಬೇಕು. ಕೇವಲ ಹೈನುಗಾರಿಕೆಯನ್ನೇ ಮುಖ್ಯವಾಗಿಟ್ಟುಕೊಂಡು ಗೋವುಗಳನ್ನು ಸಾಕುತ್ತಿರುವುದರಿಂದ ಭಾರತೀಯ ಗೋವುಗಳ ಸಾಕಾಣಿಕೆ ನಷ್ಟದಾಯಕ ಎಂಬ ಅನಿಸಿಕೆ ಬಹುತೇಕ ರೈತರಲ್ಲಿದೆ. ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಗೋಮಯ ಹಾಗೂ ಗೋಮೂತ್ರಕ್ಕೂ ಮೌಲ್ಯ ದೊರಕಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಬೇಕು. ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಗೋ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವ ಮೂಲಕ ಗೋ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.

ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಪೂರಕವಾಗಿ ಸರ್ಕಾರ ಹಾಲು ಸಂಗ್ರಹ ಕೇಂದ್ರಗಳಲ್ಲಿ ನಿಗದಿತ ದರಕ್ಕೆ ಗೋಮೂತ್ರ ಹಾಗೂ ಗೋಮಯ ಖರೀದಿಗೆ ವ್ಯವಸ್ಥೆ ಮಾಡಬೇಕು. ಎಲ್ಲ ತಾಲೂಕುಗಳಲ್ಲಿ ಗೋ ಉತ್ಪನ್ನ ಘಟಕಗಳನ್ನು ಸ್ಥಾಪಿಸಿ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾರ್ಯಯೋಜನೆ ರೂಪಿಸಬೇಕು. ಕೃತಕ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಕೃಷಿ ಇಂದು ಲಾಭದಾಯಕ ಉದ್ಯಮವಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಗೋ ಆಧರಿತ ಕೃಷಿಗೆ ಒತ್ತು ನೀಡಿದಲ್ಲಿ ಕೃಷಿಕರ ಆದಾಯ ಹೆಚ್ಚುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಗೋಮಯವನ್ನು ಪ್ರತಿ ಕೆಜಿಗೆ ಮೂರು ರೂಪಾಯಿ ದರದಲ್ಲಿ ರೈತರಿಂದ ಖರೀದಿಸುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡಾ ಗೋಮೂತ್ರ, ಗೋಮಯ ಖರೀದಿಗೆ ಮುಂದಾಗಬೇಕು. ಉತ್ತರ ಪ್ರದೇಶ ಹಾಗೂ ಇತರ ಹಲವು ರಾಜ್ಯಗಳು ರಚಿಸಿರುವ ಗೋ ಸೇವಾ ಆಯೋಗಗಳು ಗೋ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇದು ಕರ್ನಾಟಕಕ್ಕೂ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.