ಚಿತ್ರದುರ್ಗ: ರಾಜ್ಯದಲ್ಲಿ ಶ್ರೀರಾಮ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ರಾಷ್ಟ್ರಧ್ವಜಕ್ಕೂ ಅಪಮಾನಿಸಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಒನಕೆ ಓಬವ್ವ ವೃತ್ತದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ಹನುಮಾನ್ ಧ್ವಜ ಇಳಿಸಿ ಸಮಸ್ತ ಹಿಂದುಗಳಿಗೆ ಅವಮಾನಿಸಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮವಹಿಸಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಎಸ್.ಲಿಂಗಮೂರ್ತಿ ಮಾತನಾಡಿ, ಪೊಲೀಸರು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಹನುಮ ಧ್ವಜ ಇಳಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಕಾಂಗ್ರೆಸ್ ಯಾವ ಧರ್ಮದ ವಿರೋಧಿ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು.
ದೇಶದಲ್ಲಿ 60 ವರ್ಷ ಸುದೀರ್ಘ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿಗರು ಸಂವಿಧಾನದ ಆಶಯ ಈಡೇರಿಸುವ ಉದ್ದೇಶ ಹೊಂದಿದ್ದರೆ, ಏಕೆ ಶೋಷಿತರನ್ನು ಮೇಲೆತ್ತುವ ಕಾರ್ಯ ಈವರೆಗೂ ಮಾಡಲಿಲ್ಲ. ಚುನಾವಣೆ ವೇಳೆ ಮಾತ್ರ ನೆನಪಾಗುತ್ತಾರಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಗೊಳಿಸಿ ವಿಶ್ವದ ಗಮನ ಸೆಳೆದರೆ, ರಾಜ್ಯದಲ್ಲಿ ನಡೆದ ಕೆರೆಗೋಡು ಘಟನೆಗೆ ಸಿಎಂ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು. ಧರ್ಮ ಬಿಟ್ಟು ಯಾರು ಬದುಕಲು ಸಾಧ್ಯವಿಲ್ಲ. ಶ್ರೀರಾಮ, ಆಂಜನೇಯ ಸ್ವಾಮಿ ಇಲ್ಲದ ಊರುಗಳಿಲ್ಲ. ಇಂತಹ ಘಟನೆ ಎಲ್ಲಿಯೂ ನಡೆಯದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಕೆರೆಗೋಡು ಘಟನೆಯಿಂದಾಗಿ ಅಶಾಂತಿ ವಾತಾವರಣ ಉಂಟಾಗಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ನಿರ್ಮಿಸಿದೆ. ಆ ಪಕ್ಷ ಅಧಿಕಾರದಲ್ಲಿದ್ದ ವೇಳೆ ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದೆ ಎಂದು ದೂರಿದರು.
ಅಲ್ಲಿನ ಗ್ರಾಪಂ ಅನುಮೋದನೆ ಪಡೆದೇ ಹನುಮ ಧ್ವಜ ಹಾರಿಸಲಾಗಿದೆ. ಆದರೂ ಕೆಳಗಿಳಿಸಿದೆ. ಕರಸೇವಕರ ಹಳೆ ಪ್ರಕರಣ ಕೆದಕಿ ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧಿಸಿದ್ದರು. ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು 9 ತಿಂಗಳಲ್ಲಿ ಮೂರು ಬಾರಿ ಬಂಧಿಸಲಾಗಿದೆ. ಎಷ್ಟೇ ದೌರ್ಜನ್ಯ ಎಸಗಿದರೂ ಹಿಂದುಗಳು ಜಗ್ಗುವ ಮಾತಿಲ್ಲ. ಧ್ವಜ ಪುನರ್ ಪ್ರತಿಷ್ಠಾಪನೆ ಆಗುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ಮುಖಂಡರಾದ ಡಾ.ಸಿದ್ದಾರ್ಥ, ಎನ್.ಆರ್.ಲಕ್ಷ್ಮಿಕಾಂತ್, ಜಿ.ಟಿ.ಸುರೇಶ್ ಸಿದ್ದಾಪುರ, ಸೂರನಹಳ್ಳಿ ವಿಜಯಣ್ಣ, ನವೀನ್ ಚಾಲುಕ್ಯ, ಕಲ್ಲೇಶಯ್ಯ, ನರೇಂದ್ರ ಹೊನ್ನಾಳ್, ವೆಂಕಟೇಶ್‌ಯಾದವ್, ಮಲ್ಲಿಕಾರ್ಜುನ್, ಶ್ಯಾಮಲಾ ಶಿವಪ್ರಕಾಶ್, ಶೈಲಜಾ ರೆಡ್ಡಿ, ಮಂಜುಳಮ್ಮ, ಕವನಾ ಇತರರಿದ್ದರು.