ಚಿತ್ರದುರ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷವಾಗಿದೆ. ರಾಜ್ಯದಲ್ಲಿ ಒಂದು ನೂತನ ಸರ್ಕಾರಿ ಶಾಲೆ ನಿರ್ಮಾಣವಿರಲಿ, ಶಾಲೆಗಳ ಕಿಟಕಿ ದುರಸ್ತಿ ಪಡಿಸುವ ಕೆಲಸವನ್ನೂ ಮಾಡಿಲ್ಲ ಎಂದು ಮಾಜಿ ಎಂಎಲ್ಸಿ ಅರುಣ್ ಶಹಾಪುರ್ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತದಿಂದ ಕೇವಲ ಶಿಕ್ಷಕರಷ್ಟೇ ಅಲ್ಲ, ಬಿಇಒಗಳು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಇಡೀ ಶಿಕ್ಷಣ ಇಲಾಖೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಪಾಯದ ಹಂಚಿಗೆ ನೂಕುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ 52 ಬಿಇಒಗಳ ಮೇಲೆ ತನಿಖೆ ನಡೆಸಿ ಅಮಾನತ್ತಿಗೆ ಶಿಫಾರಸು ಮಾಡಿದೆ. 152 ಶಿಕ್ಷಣಾಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ ನೀಡಿದೆ. ಈ ಮೂಲಕ ಬೆದರಿಸಿ ಭ್ರಷ್ಟಾಚಾರದ ಅಪೇಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಗಧಾ ಪ್ರಹಾರಕ್ಕೆ ಮುಂದಾಗಿದೆ. ಡಯಟ್‌ಗಳಲ್ಲಿನ ಹುದ್ದೆ ಕಡಿತಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆಪಾದಿಸಿದರು.
ವಾಟ್ಸ್ ಆ್ಯಪ್ ಸಂದೇಶಗಳು, ಆನ್‌ಲೈನ್ ಮೂಲಕ ಶಿಕ್ಷಣ ಸಚಿವರು ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆ ಒನ್‌ವೇ ಟ್ರಾಫಿಕ್‌ನಲ್ಲಿ ಸಿಲುಕಿದೆ. ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸದನದಲ್ಲಿ ಶಿಕ್ಷಕರ ಪರ ಗಟ್ಟಿ ಧ್ವನಿಯಾಗಿ ನಿಲ್ಲುವವರ ಅಗತ್ಯವಿದೆ. ಆದ್ದರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆತಲ್ಲಿ ಮಾತ್ರ ಶಿಕ್ಷಣ ಇಲಾಖೆ, ನೌಕರರ ಪರವಾಗಿ ಕೆಲಸ ಮಾಡಲು ಸಾಧ್ಯ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಜಯಣ್ಣ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ ಇತರರಿದ್ದರು.