ಕೆ.ಆರ್.ಪೇಟೆ: ಬಿಜೆಪಿಯು ರಾಜ್ಯದ 135 ಕ್ಷೇತ್ರಗಳಲ್ಲಿ ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಸುಮಾರು 35 ಸಾವಿರ ಮತಗಳ ಅಂತರದಿಂದ ಮರು ಆಯ್ಕೆಯಾಗಿ ಮತ್ತೆ ಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.
ಹುಟ್ಟೂರು ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಸಚಿವ ಕೆ.ನಾರಾಯಣಗೌಡರ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ ಸಿಲಿಂಡರ್, ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಈಗ ನೀಡುತ್ತಿರುವ 5 ಕೆಜಿ ಅಕ್ಕಿ ಜತೆಗೆ 5 ಕೆ.ಜಿ. ಸೇರಿಸಿ 10 ಕೆ.ಜಿ. ಉಚಿತ ಅಕ್ಕಿ ನೀಡಲಿದ್ದೇವೆ. ಪ್ರತಿ ವರ್ಷ ವಸತಿರಹಿತರಿಗೆ 10 ಲಕ್ಷ ಮನೆ ನಿರ್ಮಿಸಿಕೊಡಲಾಗುವುದು. ಗರ್ಭಿಣಿ ಸ್ತ್ರೀಯರಿಗೆ ಆರು ಪೌಷ್ಟಿಕ ಅಂಶಗಳನ್ನು ಒಳಗೊಂಡ ಸುಮಾರು 21 ಸಾವಿರ ರೂ. ಮೌಲ್ಯದ ಕಿಟ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೆಲವರು ಹೇಳುತ್ತಿರುವಂತೆ ರಾಜ್ಯ ಬಿಜೆಪಿಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿಲ್ಲ. ಬದಲಾಗಿ ರಾಜ್ಯಾದ್ಯಂತ ಸುತ್ತಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಗುರುತರ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ನನ್ನ ಕೊನೆ ಉಸಿರು ಇರುವವರೆಗೂ ಪಕ್ಷ ನನಗೆ ನೀಡಿದ ಸ್ಥಾನಮಾನ ಮತ್ತು ಗೌರವಗಳನ್ನು ನಾನು ಮರೆಯುವುದಿಲ್ಲ. ಗ್ರಾಪಂ ಸದಸ್ಯನಾದವನು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆ ಮುಂದೆ ನೋಡುತ್ತಾನೆ. ಆದರೆ ಪಕ್ಷದ ಹಿತಕ್ಕಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವನು ನಿಮ್ಮ ಯಡಿಯೂರಪ್ಪ ಎಂದರು.
ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ರಾಜ್ಯ ಸುತ್ತುತ್ತಿದ್ದೇನೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರ ಅಂತ್ಯಕಾಲ ಆರಂಭವಾಗಿದೆ. ಮೋದಿ, ಅಮಿತ್ ಷಾ ಮುಂದೆ ರಾಹುಲ್ ಗಾಂಧಿ ಸಮಾನರಾಗಲು ಸಾಧ್ಯವೇ? ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 5 ಸ್ಥಾನಗಳೆಂದು ಛೇಡಿಸಿದರು.
ನನ್ನ ಹುಟ್ಟು ಹಬ್ಬಕ್ಕೆ ಮೋದಿ ಬಂದಾಗ ಶಿವಮೊಗ್ಗದಲ್ಲಿ 4-5 ಲಕ್ಷ ಜನ ಸೇರಿದ್ದರು. ಮೋದಿ ಜಗತ್ತು ಅಚ್ಚರಿಪಡುತ್ತಿರುವ ನಾಯಕ. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಮತ್ತೆ 25 ಸಂಸದ ಕ್ಷೇತ್ರಗಳನ್ನು ಗೆಲ್ಲಬೇಕು. ಹಣ ಬಲ, ಅಧಿಕಾರ ಬಲ ಮತ್ತು ಜಾತಿಯ ವಿಷಬೀಜ ಬಿತ್ತಿ ಅಧಿಕಾರ ಪಡೆಯುವ ಕಾಲ ಮುಗಿದಿದೆ. ಬಿಜೆಪಿ ತನ್ನ ಅಭಿವೃದ್ಧಿ ಮೇಲೆ ಮತ ಕೇಳಲಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ನಾವು ನೀಡಿರುವ ಸವಲತ್ತುಗಳನ್ನು ಇದುವರೆಗೆ ಯಾರೂ ನೀಡಿಲ್ಲ. ಬಿಜೆಪಿ ಎಲ್ಲ ಸಮುದಾಯಗಳಿಗೂ ಸಮಾನ ಸವಲತ್ತು ನೀಡಿದೆ ಎಂದರು.
ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದರು. ಕ್ಷೇತ್ರದ ಉಸ್ತುವಾರಿ ರಾಜೇಶ್ ಭಾಟಿಯಾ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಮಾಜಿ ಅಧ್ಯಕ್ಷ ಬೂಕಹಳ್ಳಿ ಮಂಜು, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಮುಖಂಡರಾದ ಕೆ.ಶ್ರೀನಿವಾಸ್, ಶೀಳನೆರೆ ಅಂಬರೀಶ್, ಕಿಕ್ಕೇರಿ ಪ್ರಭಾಕರ್, ಬಿ.ಜವರಾಯಿಗೌಡ, ಕೆ.ಎಸ್.ಸಂತೋಷ್‌ಕುಮಾರ್, ವಿ.ಡಿ.ಹರೀಶ್, ಬಿ.ಎನ್.ದಿನೇಶ್, ಮೀನಾಕ್ಷಿ, ಪುಟ್ಟರಾಜು, ಬ್ಯಾಲದಕೆರೆ ಪಾಪೇಗೌಡ ಹಲವರು ವೇದಿಕೆಯಲ್ಲಿದ್ದರು.
1800 ಕೋಟಿ ರೂ. ಅನುದಾನ: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕೆಂದು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾಗಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹೇಳಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಅಭಿವೃದ್ಧಿಗೆ 700 ಕೋಟಿ ರೂ. ಅನುದಾನ ನೀಡುವಂತೆ ಕೇಳಿದ್ದೆ. ಆದರೆ ಅವರು 1 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿ 1800 ಕೋಟಿ ರೂ. ಅನುದಾನವನ್ನು ತಾಲೂಕಿಗೆ ಕೊಟ್ಟರು. ಇನ್ನೂ ಒಳ್ಳೆಯ ಕೆಲಸ ಮಾಡುವ ಕಾಲ ಬರುತ್ತೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಗೆ ಈ ಬಾರಿ 130 ಸೀಟ್ ಬರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.