ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ  
ಜಿಲ್ಲೆ

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಳ

ಚಿಕ್ಕಮಗಳೂರು: ರಾಜ್ಯದಲ್ಲಿ ಇಂದು ವ್ಯಾಪಕವಾಗಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದ್ದು, ಇದರಿಂದ ಅಪರಾಧ, ಕೊಲೆ, ಸುಲಿಗೆ, ಭಯೋತ್ಪಾದನೆ, ಲವ್ ಜಿಹಾದ್ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಡ್ರಗ್ಸ್ ದಂಧೆಯ ರುವಾರಿಗಳೇ ಕಾಂಗ್ರೆಸ್‌ ನಾಯಕರು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಡ್ರಗ್ಸ್ ದಂಧೆಯ ರೂವಾರಿಯಾಗಿದ್ದಾನೆ. ಈತನನ್ನು ಮುಂಬೈ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಪೊಲೀಸ್‌ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಉದ್ದಗಲಕ್ಕೂ ಡ್ರಗ್ಸ್ ದಂಧೆ ವ್ಯಾಪಿಸಿದ್ದು, ರಾಷ್ಟ್ರದ್ರೋಹಿ ಚಟುವಟಿಕೆಗಳಿಗೆ ಡ್ರಗ್ಸ್ ದಂಧೆಯಿಂದ ಹಣ ಕ್ರೊಡಿಕರಿಸಲಾಗುತ್ತಿದೆ. ಭಯೋತ್ಪಾದನೆ ಚಟುವಟಿಕೆಗೆ ಡ್ರಗ್ಸ್ ಹಣವನ್ನು ಬಳಕೆ ಮಾಡುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ದೂರಿದರು.

ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಶಾಲಾ-ಕಾಲೇಜುಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಪಬ್‌ಗಳಲ್ಲಿ ನಡೆಯುತ್ತಿದೆ. ಇದರ ಹಿಂದೆ ರಾಜ್ಯದ ಸಚಿವರಾದ ಪ್ರಿಯಾಂಕ ಖರ್ಗೆ ಇರುವ ಅನುಮಾನ ಕಾಡುತ್ತಿದೆ. ಕೂಡಲೇ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಜಾಗತಿಕವಾಗಿ ಪೊಲೀಸ್ ಅಧಿಕಾರಿಗಳಿಗೂ ಮೂಲಗಳಿಂದ ಹಣ ಬರುತ್ತಿದೆ. ಹೀಗಾಗಿ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ. ಇದಕ್ಕೆ ಕಾರಣ ಎನು ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು. ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ಪೊಲೀಸ್ ರಕ್ಷಣೆಯ ಕಣ್ಗಾವಲಿನಲ್ಲಿ ಡ್ರಗ್ಸ್ ಅವ್ಯವಹಾರ ನಡೆಯುತ್ತಿರುವ ಅನುಮಾನವಿದೆ. ಕಳೆದ ಮೂರು ತಿಂಗಳ ಹಿಂದೆ ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದರೂ ಆಗಲೂ ಕೂಡ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ರಾಜ್ಯದಿಂದ ಬೇರೆ ರಾಜ್ಯಗಳಿಗೆ ವಿವಿಧ ಕಂಪನಿಗಳು ವಲಸೆ ಹೋಗುತ್ತಿವೆ. ೨೫ ರಿಂದ ೩೦ ಸಾವಿರ ಯುವಕರಿಗೆ ಉದ್ಯೋಗ ನೀಡುವ ಟೊಯೋಟೊ ಮಹಾರಾಷ್ಟ್ರಕ್ಕೆ ವರ್ಗಾವಣೆಯಾಗಿದೆ. ಇನ್ಫೋಸಿಸ್ ಸಂಸ್ಥೆಯ ಹೊಸ ಶಾಖೆ ಹೈದರಾಬಾದ್‌ಗೆ ಸ್ಥಳಾಂತರವಾಗಿದೆ. ಇದರಿಂದ ೫ ಸಾವಿರ ಜನರಿಗೆ ಕೆಲಸ ಸಿಗುತ್ತಿತ್ತು. ಆಪಲ್ ಪೊಕ್ಸೊನ್ ಶಾಖೆ ತಮಿಳುನಾಡಿಗೆ ಮೂಲ ಸೌಕರ್ಯವಿಲ್ಲದೆ ಸ್ಥಳಾಂತರವಾಗಿದೆ. ಸೆಮಿಕಂಡಕ್ಟರ್ ಕರ್ನಾಟಕಕ್ಕೆ ಬಂದಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರುತ್ತಿದೆ ಎಂದು ಹೇಳಿದರು.

ಸಚಿವ ಪ್ರಿಯಾಂಕ ಖರ್ಗೆ ಅವರು ತಮ್ಮ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿ ಅದನ್ನು ರಾಜ್ಯದ ಜನರಿಗೆ ತಲುಪಿಸುವ ಬದಲು ದಿನನಿತ್ಯ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ತೆಗಳಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಅನ್ನಭಾಗ್ಯದ ಅಕ್ಕಿ ರಾಜ್ಯದಲ್ಲಿ ಮಾರಾಟವಾಗುತ್ತಿದೆ. ಅನ್ನಭಾಗ್ಯದ ಅಕ್ಕಿ ಹೊರ ರಾಜ್ಯದಲ್ಲಿ ಪಾಲಿಶ್ ಆಗಿ ಬೇರೆ ಬೇರೆ ಬ್ರಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಹಿಂದಿನಿಂದಲೂ ಕೂಡ ಕೇಳಿ ಬರುತ್ತಿದ್ದ ಬಹಳ ದೊಡ್ಡ ಆರೋಪ ಇದಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆ ಇದೆ. ಹೊರ ರಾಜ್ಯಗಳಿಗೆ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡಲು ಗೋದಾಮಿಗೆ ಕನ್ನ ಹಾಕಿರುವ ಶಂಕೆ ಇದೆ. ಪಡಿತರ ಕಾರ್ಡ್ ನಲ್ಲಿ ವಿತರಣೆಯಾಗುವ ಅಕ್ಕಿಯು ಕೂಡ ಜಾಲದ ಪಾಲಾಗುತ್ತಿರುವ ಸಂಶಯವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಾರವಾದ ಶ್ರದ್ಧೆ ಭಕ್ತಿ ಇದೆ. ಧರ್ಮಸ್ಥಳವು ಬಡವರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಮದ್ಯ ಮುಕ್ತ ಮಾಡುವುದರಿಂದ ಹಿಡಿದು ಬದುಕು ಕಟ್ಟಿಕೊಡಲು ನೆರವು ನೀಡುತ್ತಿದೆ. ಧರ್ಮಸ್ಥಳವು ನಡೆಸುವ ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ಜನರಿಂದ ಉತ್ತಮ ಸ್ಫಂದನೆ ಕಂಡು ಬಂದಿದ್ದು, ಬೇಧ ಭಾವ ಮಾಡದೇ ಎಲ್ಲರನ್ನು ಸಮಾನತೆಯಿಂದ ಗಟ್ಟಿಗೊಳಿಸುವ ಕೆಲಸವನ್ನು ಧರ್ಮಸ್ಥಳ ಮಾಡುತ್ತಿದೆ ಎಂದರು.

ಧರ್ಮಸ್ಥಳವನ್ನು ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ. ಸಹೋದರತ್ವ ಮತ್ತು ಸಮಾನತೆಯನ್ನು ದುರ್ಬಲಗೊಳಿಸಲು ಅಪಪ್ರಚಾರ ಮಾಡಲಾಗುತ್ತಿದೆ. ಸಮಗ್ರ ತನಿಖೆಯಾಗಲಿ. ತನಿಖೆ ಆಗುವ ಮೊದಲು ಅನುಮಾನ ಪಡಬಾರದು. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿದರು.

ಮೈಸೂರಿನಲ್ಲಿ ಕಾಂಗ್ರೆಸ್‌ ಸಾಧನಾ ಸಮಾವೇಶ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಅವರು, ಪ್ರಜಾಪ್ರಭುತ್ವದಲ್ಲಿ ಶಕ್ತಿ ಕೊಡುವುದು ಜನ. ಈಗ ಜನ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‌ ಕೆಲಸ ಮಾಡುವುದನ್ನು ಬಿಟ್ಟು ಭ್ರಷ್ಟಾಚಾರ, ಬೆಲೆ ಏರಿಕೆ ಮಾಡಿದೆ. ಹೀಗಾಗಿಯೇ ಸರ್ಕಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇದನ್ನೆಲ್ಲಾ ನೋಡಿದರೆ ಸರ್ಕಾರಕ್ಕೆ ನಿಶಕ್ತಿಯಾದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು,

ಬೆಲೆ ಏರಿಕೆ, ಭ್ರಷ್ಟಾಚಾರಗಳು ಸರ್ಕಾರದ ಸಾಧನೆಯಾಗುತ್ತಾ?

ಬೆಲೆ ಏರಿಕೆ ಮಾಡದೇ ಪಂಚ ಗ್ಯಾರಂಟಿ ಕೊಟ್ಟಿದ್ರೆ ನಾನೂ ಅಪ್ರಿಸಿಯೇಟ್ ಮಾಡುತ್ತಿದ್ದೆ. ಕರ್ನಾಟಕದ ಈ ವರ್ಷದ ಸಾಲ ಒಂದು ಲಕ್ಷದ ಹದಿನಾರು ಸಾವಿರ ಕೋಟಿ ರೂಪಾಯಿ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ಮಾಡಿ ಏನು ಸಾಧನೆ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚ ಗ್ಯಾರಂಟಿ ಬಿಟ್ಟು ಬೇರೆ ಏನು ಮಾಡಿದ್ದೀರಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸಾಲ ಮಾಡಿ ,ಭ್ರಷ್ಟಾಚಾರ ಮಾಡಿ ಪಂಚ ಗ್ಯಾರಂಟಿ ಕೊಟ್ಟಿರೋದು ನೀವು ಎಂದು ಕಿಡಿಕಾರಿದರು.