ಜಿಲ್ಲೆ

ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಉತ್ತಮವಾಗಿದೆ:ಡಾ.ಜಿ. ಪರಮೇಶ್ವರ್

ಹಾಸನ: ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿರುವಂತಹ ರಾಜ್ಯಗಳನ್ನು ಗಮನಿಸಿದರೆ, ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಉತ್ತಮವಾಗಿದೆ. ವಿರೋಧ ಪಕ್ಷದವರ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಎಂಬ ವಿರೋಧ ಪಕ್ಷದವರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಬೇರೆ ರಾಜ್ಯಗಳಲ್ಲಿಗಿಂತ ನಮ್ಮ ರಾಜ್ಯದಲ್ಲಿ ಕಾನೂನು ಸದಸ್ಯ ಉತ್ತಮವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ವಿರೋಧ ಪಕ್ಷದವರು ವಿನಾಕಾರಣ ಕಾನೂನು ಸುವ್ಯವಸ್ಥೆ ಬಗ್ಗೆ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಅವರು ಪಕ್ಷ ಆಡಳಿತ ನಡೆಸುತ್ತಿರುವ ಬೇರೆ ರಾಜ್ಯದಲ್ಲಿ ಯಾವ ರೀತಿ ಆಡಳಿತ ಇದೆ. ಅಲ್ಲಿ ಎಷ್ಟು ಪ್ರಕರಣಗಳಾಗಿವೆ? ಎಷ್ಟು ಕೊಲೆಗಳಾಗಿವೆ? ಎಂಬುದನ್ನ ಗಮನಿಸಿ ಆನಂತರ ನಮ್ಮ ಇಲಾಖೆಯ ಬಗ್ಗೆ ಮಾತನಾಡಲಿ ಎಂದು ಟಾಂಗ್ ನೀಡಿದರು.
ನಮ್ಮ ಸರ್ಕಾರ ಕಾನೂನು ಸುವ್ಯಸ್ಥೆಗೆ ದಕ್ಕೆ ಹಾಕದಂತೆ ಆಡಳಿತ ನಡೆಸುತ್ತಿದೆ. ಸೃಜನ ಪಕ್ಷಪಾತ, ಧರ್ಮಗಳ ನಡುವೆ ಗಲಭೆ ಇಲ್ಲದಂತೆ ಕಳೆದ ಒಂದು ವರ್ಷದಿಂದ ನಮ್ಮ ಇಲಾಖೆ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಕೆಲವು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೂಡ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದಿಂದ ಯಾವುದೇ ಗಲಭೆಗಳು ಮತ್ತು ಗಣೇಶೋತ್ಸವ ಸಂದರ್ಭದಲ್ಲಿ ಧರ್ಮ ಧರ್ಮಗಳ ನಡುವೆ ಶಾಂತಿ ವ್ಯವಸ್ಥೆಯನ್ನ ಕೆದಾಡುವಂತಹ ಕೆಲಸಗಳು ನಡೆದಿಲ್ಲ. ಈ ಹಿಂದೆ ಹುಬ್ಬಳ್ಳಿ, ಮಂಗಳೂರು , ಶಿವಮೊಗ್ಗ ಗಲಭೆಗಳ ರೀತಿ ಯಾವುದು ಪ್ರಕರಣಗಳು ದಾಖಲಾಗಿಲ್ಲ. ಮೊದಲು ವಿರೋಧ ಪಕ್ಷದವರಿಗೆ ಕಾನೂನು ಸುವ್ಯವಸ್ಥೆ ಎಂದರೆ ಏನು ಎಂಬುದರ ಬಗ್ಗೆ ಕೇಳಬೇಕು ಮತ್ತು ಅದರ ಬಗ್ಗೆ ಅವರು ತಿಳಿದುಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಠಾಣೆಯನ್ನ ತೆರೆಯಲಾಗಿತ್ತು. ಆನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ 43 ಸೈಬರ್ ಕ್ರೈಂ ಠಾಣೆಗಳನ್ನ ಆರಂಭಿಸಲಾಗಿದ್ದು, ಅಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತಿದೆ. ಮತ್ತು ಸೈಬರ್ ಕ್ರೈಂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿ ನೂರಾರು ಕೋಟಿ ಹಣ ಕಳೆದುಕೊಂಡವರಿಗೆ ವಾಪಸ್ ನೀಡಿದ್ದಾರೆ ಎಂದು ಹೇಳಿದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಜಿಲ್ಲೆಯಲ್ಲಿ ಈ ಹಿಂದೆ ಏಳು ಜನ ಮಕ್ಕಳು ಕೆರೆಯಲ್ಲಿ ಈಜಾಡಲು ಹೋಗಿ ಮೃತಪಟ್ಟ ಸಂಬಂಧ ಸರ್ಕಾರದಿಂದ ಪರಿಹಾರ ಹಣ ವಿತರಣೆಗೆ ನನ್ನನ್ನ ಆಹ್ವಾನಿಸಿದರು. ಆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿ ಪರಿಹಾರದ ಚಕ್‌ವನ್ನು ವಿತರಿಸಿದ್ದೇವೆ, ಜೊತೆಗೆ ಇಲಾಖೆಯ ಪರಿಶೀಲನ ಸಭೆ ನಡೆಸಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕ ಡಾ.ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹಾಜರಿದ್ದರು.

ಎಲ್ಲರಿಗೂ ಒಂದೇ ಕಾನೂನು:
ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲೆಯಲ್ಲಿ ವಿಶೇಷ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಈ ಪ್ರಕರಣವನ್ನ ದಾಖಲಾದ ನಂತರ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಯಾರ ಮೂಲಜಿಗೂ ಮತ್ತು ಒತ್ತಡಕ್ಕೂ ಮಣಿಯದೆ ಕೆಲಸ ಮಾಡುತ್ತಿದೆ ಎಂದು ತಮ್ಮ ಇಲಾಖೆಯನ್ನು ಗೃಹ ಸಚಿವರು ಸಮರ್ಥಿಸಿಕೊಂಡರು.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದ್ದು, ಸಾಕ್ಷಾಧಾರಗಳ ಆಧಾರದ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡಿದೆ. ಯಾರು ಎಷ್ಟೇ ದೊಡ್ಡವರಾದರೂ ಕೂಡ ಯಾರನ್ನು ರಕ್ಷಿಸದೆ, ಎಲ್ಲರಿಗೂ ಒಂದೇ ಕಾನೂನು ಎಂಬ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸಂಪೂರ್ಣ ಅಧಿಕಾರ ನೀಡಿದ್ದು, ನಾವ್ಯಾರು ಕೂಡ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು

ರಾಜಕೀಯ ಷಡ್ಯಂತ್ರ ನಡೆಸಿಲ್ಲ;
ರೇವಣ್ಣ ಕುಟುಂಬದ ವಿರುದ್ಧ ನಡೆಯುತ್ತಿರುವ ಪ್ರಕರಣಗಳು ರಾಜಕೀಯ ಷಡ್ಯಂತ್ರ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಸಿದ ಗೃಹ ಸಚಿವರು, ಇದು ಸತ್ಯಕ್ಕೆ ದೂರವಾದದ್ದು, ಈ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ .ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ, ಪ್ರೇರಣೆಯು ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ತನಿಕೆಯ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ. ಇದರಲ್ಲಿ ಯಾರು ರಾಜಕೀಯ ಮಾಡುತ್ತಿಲ್ಲ, ನಮ್ಮ ಇಲಾಖೆಯ ಅಧಿಕಾರಿಗಳು ಉತ್ತಮವಾಗಿ ತನಿಖೆ ನಡೆಸುತ್ತಿದ್ದಾರೆ. ಯಾರೂ ಕೂಡ ಸಂಶಯ ಪಡಬೇಕಾಗಿಲ್ಲ ಎಂದು ಹೇಳಿದರು.

ಸೂರಜ್ ಪ್ರಕರಣ ಕಾನೂನಿನ ಪ್ರಕಾರ ಕ್ರಮ:
ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ಅವರ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಾನೂನಿನ ಪ್ರಕಾರ ಏನು ಕ್ರಮ ಆಗಬೇಕು ಅದನ್ನ ತೆಗೆದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ಕ್ರಮ ಜರುಗಿಸಿದ್ದಾರೆ. ದೂರು ಬಂದ ನಂತರ ಪೊಲೀಸರು ತನಿಖೆ ನಡೆಸಿ ಆನಂತರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಸಂತ್ರಸ್ತ ದೂರು ಕೊಟ್ಟಿದ್ದಾರೆ, ಆ ಬಗ್ಗೆ ತನಿಖೆ ನಡೆಯುತ್ತದೆ. ಅದೇ ರೀತಿ ಸೂರತ್ ರೇವಣ್ಣ ಅವರು ಕೂಡ ದೂರು ನೀಡಿದ್ದಾರೆ. ಆ ಬಗ್ಗೆಯೂ ಕೂಡ ತನಿಖೆ ನಡೆಯುತ್ತದೆ. ಇದರಲ್ಲಿ ಯಾವುದೇ ರೀತಿ ಹಸ್ತಕ್ಷೇಪವಾಗಲಿ ಅಥವಾ ಒತ್ತಡವಾಗಲಿ ಯಾರ ಮೇಲೆಯೂ ಕೂಡ ಹೇರುವುದಿಲ್ಲ ಎಂದರು.

ಶೀಘ್ರದಲ್ಲಿ ಕೇಂದ್ರ ಗೃಹ ಸಚಿವರ ಭೇಟಿ:
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮನೆ ಕಟ್ಟಿಸುವ ಸಂಬಂಧ ಶೀಘ್ರದಲ್ಲೇ ಕೇಂದ್ರ ಗೃಹ ಸಚಿವರನ್ನ ಭೇಟಿಯಾಗಿ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಈಗಾಗಲೇ ನಮ್ಮ ಸರ್ಕಾರದ ವತಿಯಿಂದ 10,ಸಾವಿರ ಮನೆ ಕಟ್ಟಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಈ ಹಿಂದಿನ ಬಜೆಟ್ಟಿನಲ್ಲಿ 400 ಕೋಟಿ ಅನುದಾನವನ್ನ ಮೀಸಲಿಟ್ಟಿದ್ದೇವೆ. ಈಗ ಪ್ರಸ್ತುತ ನಮ್ಮ ಇಲಾಖೆಯಲ್ಲಿ ಇರುವಂತಹ ಸಿಬ್ಬಂದಿಗಳಿಗೆ ಶೇಕಡ 40ರಷ್ಟು ಮನೆ ಇದೆ. ಮುಂದಿನ ದಿನಗಳಲ್ಲಿ ಶೇಕಡ 70ರಷ್ಟು ಮನೆ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಶೀಘ್ರದಲ್ಲಿ 20,000 ನೇಮಕಾತಿ:
ಈ ಹಿಂದಿನ ಸರ್ಕಾರಗಳು ಪೊಲೀಸ್ ನೇಮಕಾತಿಯನ್ನ ಮಾಡಿಕೊಂಡಿಲ್ಲ, ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೀಘ್ರದಲ್ಲಿ 20,000 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಪಿಎಸ್‌ಐ ಹಗರಣ ಆದಮೇಲೆ ತನಿಖೆ ನಂತರ ಮತ್ತೆ ಮರು ಪರೀಕ್ಷೆಯನ್ನ ನಡೆಸಲಾಗಿದೆ. ಇದಾದ ಮೇಲೆ 400 ಜನ ಹಾಗೂ 600 ಜನ ಪಿಎಸ್‌ಐ ಗಳನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ ಒಟ್ಟು 1500 ಪಿಎಸ್‌ಐ ಗಳನ್ನು ನೇಮಕ ಮಾಡಿಕೊಳ್ಳಲಾಗುವುದೆಂದು ಹೇಳಿದರು.

ಸಿಎಂ ಬದಲಾವಣೆ ಪ್ರಶ್ನೆ ಇಲ್ಲ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಗ್ಯಾರಂಟಿಗಳನ್ನ ಅನುಷ್ಠಾನ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ಅವರ ಬದಲಾವಣೆ ಎಂಬ ಊಹಾಪೋಹ ಹರಿದಾಡುತ್ತಿತ್ತು. ಅವರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.