ಜಿಲ್ಲೆ

ರಾಜ್ಯದಲ್ಲಿ ಎಂಇಎಸ್ ನಿಷೇಧಿಸಿ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಆಗ್ರಹ

ಆನೇಕಲ್: ಕನ್ನಡದ ಬಾವುಟಕ್ಕೆ ಬೆಂಕಿ ಇಡುವ ಮೂಲಕ ಎಂಇಎಸ್ ಸಂಘಟನೆ ಕನ್ನಡಿಗರ ಸ್ವಾಭಿಮಾನ ಕೆಣಕಿದೆ. ಆ ಸಂಘಟನೆ ಇದರ ಪರಿಣಾಮ ಎದುರಿಸಬೇಕಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಕಿಡಿಕಾರಿದರು.

ಕನ್ನಡ ಒಕ್ಕೂಟದ ನೇತೃತ್ವದಲ್ಲಿ ಗಡಿ ಬಂದ್ ಹೋರಾಟದ ಹಿನ್ನೆಲೆಯಲ್ಲಿ ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರಭಟನೆ ನಡೆಸಿದ ಬಳಿಕ ಮಾತನಾಡಿದರು.

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಬಸವಣ್ಣ, ಸಂಗೊಳ್ಳಿ ರಾಯಣ್ಣ ಮತ್ತಿತರ ಕನ್ನಡ ವೀರಪುರುಷರ ಮೂರ್ತಿಗಳನ್ನು ಭಗ್ನಗೊಳಿಸಿ, ದುಂಡಾವರ್ತನೆ ತೋರಿದ್ದಾರೆ. ಆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ಅಧಿವೇಶನದಲ್ಲಿ ರಾಜಕಾರಣಿಗಳು ಭಾಷಣ ಮಾಡಿದರೆ ಸಾಲದು, ಗಡಿಯಲ್ಲಿ ಪುಂಡಾಟಕ್ಕೆ ಪ್ರೇರಣೆ ನೀಡುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಬಂಧಿಸಲು ಹಾಗೂ ಅವರ ಸರ್ಕಾರವನ್ನು ವಜಾಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

ಎಂಇಎಸ್ ನಿಷೇಧಿಸಲು ಸರ್ಕಾರಕ್ಕೆ ಡಿ.29ರವರೆಗೆ ಸಮಯಾವಕಾಶ ನೀಡಿದ್ದೇವೆ. ಆ ನಂತರದಲ್ಲೂ ನಿಷೇಧಿಸದೇ ಇದ್ದರೆ, ಡಿ.31ರಂದು ರಾಜ್ಯ ಬಂದ್ ಆಗಲಿದೆ. ಬಂದ್‌ಗೆ ಈಗಾಗಲೆ 500ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಇನ್ನೆರಡು ದಿನಗಳಲ್ಲಿ ಇನ್ನಷ್ಟು ಸಂಘಟನೆಗಳ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದರು.

ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮಾತನಾಡಿ, 40 ವರ್ಷಗಳಿಂದ ಕನ್ನಡ ಚಳವಳಿಗಳಲ್ಲಿ ತೊಡಗಿಕೊಂಡಿದ್ದೇನೆ. ಎಂಇಎಸ್‌ನಿಂದ ಒಂದಿಲ್ಲೊಂದು ಕಿರಿಕಿರಿ ಆಗುತ್ತಿದೆ. ಇದಕ್ಕೆ ಕೊನೇ ಇಲ್ಲದಂತೆ ಆಗಿದೆ. ಆದ್ದರಿಂದ, ರಾಜ್ಯದಲ್ಲಿ ಆ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಬಂದ್‌ಗೆ ರಾಜ್ಯ ಸರ್ಕಾರ ಸೇರಿ ಎಲ್ಲ ಸಂಸದರೂ ಬೆಂಬಲ ಸೂಚಿಸಬೇಕು. ಕೇಂದ್ರ ಸರ್ಕಾರದ ಬಳಿ ರಾಜ್ಯದ ಸಂಸದರು ಮಾತನಾಡಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಭದ್ರತೆ ಒದಗಿಸಲು ಮುಂದಾಗಬೇಕು ಎಂದರು.

ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥದೇವ, ಕನ್ನಡಪರ ಹೋರಾಟಗಾರದ ಕುಮಾರ್, ಕಿರಣ್, ಕನ್ನಡ ಸೋಮು, ಆರ್. ಮಧು , ಆರ್. ಸತೀಶ್, ಗಿರೀಶ್ ಗೌಡ, ಅಮಿತ್ ಚಂದ್ರು ಮತ್ತಿತರರಿದ್ದರು.

ಬಂಧಿಸಿ, ಬಿಡುಗಡೆ: ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ, ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು. ಪೊಲೀಸರು ಹೋರಾಟಗಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು. ಆನೇಕಲ್ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್, ಸಿಪಿಐ ವಿಶ್ವನಾಥ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.