ಜಿಲ್ಲೆ

ರಾಜ್ಯದಲ್ಲಿ 10 ಕಡೆ ಹೆಸರು-ಉದ್ದು ಖರೀದಿ ಕೇಂದ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಹೆಸರು ಮತ್ತು ಉದ್ದಿಗೆ ಪ್ರತಿ ಕ್ವಿಂಟಾಲ್​ಗೆ 7750 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ರಾಜ್ಯದಲ್ಲಿ 10 ಕಡೆ ಖರೀದಿ ಕೇಂದ್ರ ತೆರೆಯಲು ಕೇಂದ್ರ ಸೂಚಿಸಿದ್ದು, ಧಾರವಾಡ ಜಿಲ್ಲೆಯಲ್ಲಿ ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಹಾಗೂ ಉದ್ದು ಬೆಳೆಗೆ ಬೆಂಬಲ ಬೆಲೆ ಘೊಷಿಸಿ ಖರೀದಿ ಕೇಂದ್ರ ತೆರೆಯಬೇಕೆಂಬ ತಮ್ಮ ಪ್ರಸ್ತಾವನೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಕ್ಷಣ ಸ್ಪಂದಿಸಿ ಆದೇಶ ಹೊರಡಿಸಿದ್ದಾರೆ. 36,390 ಮೆಟ್ರಿಕ್ ಟನ್ ಹೆಸರು ಹಾಗೂ 9242 ಮೆಟ್ರಿಕ್ ಟನ್ ಉದ್ದು ಖರೀದಿಸಲಾಗುವುದು. ಖರೀದಿಸಿದ 3 ದಿನಗಳಲ್ಲಿ ರೈತರ ಖಾತೆಗೆ ಹಣ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಲೋಪದೋಷಗಳಾಗಿರುವ ಕುರಿತು ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತ್ವರಿತವಾಗಿ ವರದಿ ನೀಡುವಂತೆ ಅವರಿಗೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಸುರೇಶ ಬೆದರೆ, ಇತರರು ಇದ್ದರು.