ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿ, ಸಂಕಲ್ಪಿತ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಲಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಸಲಹೆ ನೀಡಿದ್ದಾರೆ. ಬೆಳಗಾವಿಯ ವಿನಾಯಕ ನಗರದಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯಡಿಯೂರಪ್ಪ ಪದತ್ಯಾಗದಿಂದ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ ಬೇಸರದಲ್ಲಿತ್ತು. ಅದನ್ನು ಸರಿದೂಗಿಸಲು ಮತ್ತೋರ್ವ ವೀರಶೈವ ಲಿಂಗಾಯತ ಸಮುದಾಯದ ನಾಯಕನ ನೇಮಕ ಮಾಡಿರುವುದು ಸಂತಸ ತಂದಿದೆ ಎಂದರು. ಬಸವರಾಜ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಅವರ ಪಕ್ಷದ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿ. ಬೊಮ್ಮಾಯಿ ಅವರು ಚಾಣಾಕ್ಷ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳೂ ಅವರ ಮೇಲಿಲ್ಲ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಾಮರ್ಥ್ಯ ಅವರಿಗಿದೆ. ಬಸವರಾಜ ಅವರ ಆಯ್ಕೆಯಲ್ಲಿ ಯಡಿಯೂರಪ್ಪ ಹೆಚ್ಚಿನ ಮುತುವರ್ಜಿ ವಹಿಸಿದ್ದು ಕಾಣುತ್ತಿದೆ. ಅಲ್ಲದೆ, ಯಡಿಯೂರಪ್ಪ ಅವರ ಮಾತಿಗೆ ರಾಷ್ಟ್ರೀಯ ನಾಯಕರೂ ಗೌರವ ಕೊಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದೇವೆ ಎಂದು ಶ್ರೀಗಳು ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮೊಬೈಲ್ ೆನ್ ಮೂಲಕ ಕರೆ ಮಾಡಿ, ‘ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ. ಆಶೀರ್ವಾದ ಮಾಡಿ’ ಎಂದರು. ಅವರಿಗೆ ಪೀಠದದಿಂದ ಸದಾ ಆಶೀರ್ವಾದ ಇದ್ದೇ ಇರುತ್ತದೆ. ಮೈಸೂರು ಪ್ರಾಂತ್ಯದಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗುತ್ತಿಲ್ಲ ಎಂಬ ಕೂಗು ಇದೆ. ಅದನ್ನು ನೂತನ ಸಿಎಂ ನಿವಾರಿಸಲಿದ್ದಾರೆ. ಈ ಭಾಗದ ರೈತ ಸಮುದಾಯಕ್ಕೆ ಒಳ್ಳೆಯದಾಗಲು ನೀರಿನ ಸೌಲಭ್ಯ ಕಲ್ಪಿಸಬೇಕು. ಬೆಳಗಾವಿಯ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಅವರು ಮುಂದಾಗಬೇಕಿದೆ. ಮೌಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಿ, ಜಾತಿ-ಮತ, ವರ್ಗಗಳೆಂದು ಭೇದ-ಭಾವ ತೋರದೆ ಕೆಲಸ ಮಾಡಲಿ ಎಂದು ರಂಭಾಪುರಿ ಶ್ರೀಗಳು ಹಾರೈಸಿದರು.