ಚಿತ್ರದುರ್ಗ: ಶಿಕ್ಷಣ, ಶಿಕ್ಷಕರ ಧ್ವನಿಯಾಗಿರುವ ಎನ್‌ಡಿಎ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
ನಗರದ ವಿನಾಯಕ ಕಲ್ಯಾಣ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ವಿರೋಧಿಗಳು ನಾರಾಯಣಸ್ವಾಮಿ ಹೆಸರಿನ ನಾಲ್ವರನ್ನು ಅಖಾಡಕ್ಕೆ ಇಳಿಸುವ ಮೂಲಕ ಕುತಂತ್ರದ ರಾಜಕಾರಣ ನಡೆಸಿದ್ದಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆಂಬ ಕಾರಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುತ್ತಿರುವ ಕಾಂಗ್ರೆಸ್, ಶಿಕ್ಷಣ ಕ್ಷೇತ್ರದ ಪ್ರಗತಿ ರಾಜ್ಯ-ಕೇಂದ್ರ ಸರ್ಕಾರಗಳ ಜಂಟಿ ಹೊಣೆ ಎಂಬುದನ್ನು ಮರೆತಿದೆ. ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಈ ಕ್ಷೇತ್ರ ಕಲುಷಿತಗೊಳ್ಳುತ್ತಿದೆ. ಅವರಿನ್ನೂ ಸಿನಿಮಾ ರಂಗದಲ್ಲೇ ಇದ್ದನೇ ಎಂದು ಭಾವಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪರ ವಿರುದ್ಧ ಕಿಡಿಕಾರಿದರು.
ರೈತರ ಕಣ್ಣೀರು ಒರೆಸುವಂಥ ಬಿ.ಎಸ್.ಯಡಿಯೂರಪ್ಪ ಅವರು ಶಿಕ್ಷಣ ಕ್ಷೇತ್ರವನ್ನೂ ಬಲಪಡಿಸಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಅವರು ಡಿಸಿಎಂ ಆಗಿದ್ದಾಗ ಶಿಕ್ಷಣಕ್ಕೆ 4,866 ಕೋಟಿ ರೂ. ಹಾಗೂ ಸಿಎಂ ಆಗಿದ್ದಾಗ 18 ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಿದ್ದರು. 2600 ಶಿಕ್ಷಕರನ್ನು ನೇಮಕ ಮಾಡಿದ್ದರು. ಸಾವಿರಕ್ಕೂ ಹೆಚ್ಚು ಪ್ರೌಢಶಾಲೆ, 536 ಪಪೂ ಕಾಲೇ ಜು ಪ್ರಾರಂಭಿಸಿದ್ದರೆಂದು ಯಡಿಯೂರಪ್ಪ ಅವರ ಕೊಡುಗೆಗಳನ್ನು ನೆನಪಿಸಿದರು.
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಶಿಕ್ಷಕರ ಶಕ್ತಿ ಮತ್ತು ಕಾಂಗ್ರೆಸ್ಸಿನ ಹಣ ಬಲದ ನಡುವೆ ಚುನಾವಣೆ ನಡೆಯುತ್ತಿದೆ. ಒಂದೊಂದು ಮತವೂ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರು ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ವಿರುದ್ಧ ಸ್ಪಷ್ಟ ಸಂದೇಶ ಸಾರಬೇಕಿದೆ ಎಂದರು.
ನುಡಿದಂತೆ ನಡೆದಿದ್ದೇವೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಒಪಿಎಸ್ ಜಾರಿ ಮಾಡಲಿಲ್ಲ. ಖಾಲಿ ಹುದ್ದೆಗಳನ್ನ್ನೂ ಭರ್ತಿ ಮಾಡದೆ ಅನುದಾನಿತ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಾಯಿಸಬೇಕೆಂಬ ಶಿಕ್ಷಕರ ಕೋರಿಕೆಗೆ, ರಿಟೈಲ್ ಆಗಿ ಯಾಕೆ? ಹೋಲ್‌ಸೇಲ್ ಆಗಿಯೇ ಈ ಸರ್ಕಾರ ಬದಲಾಯಿಸೋಣ ಎಂದರು.
ಮಾಸಿ ಡಿಸಿಎಂ ಗೋವಿಂದ ಎಂ.ಕಾರಜೋಳ ಮಾತನಾಡಿ, ಯಡಿಯೂರಪ್ಪ ಅವರು 5 ಮತ್ತು 6ನೇ ವೇತನ ಆಯೋಗದ ವರದಿ ಜಾರಿಗೊಳಿಸಿದ್ದರು. ಆದರೆ, ಸರ್ಕಾರಿ ನೌಕರರ ವಿರೋಧಿಯಾಗಿರುವ ಸಿದ್ದರಾಮಯ್ಯ 7ನೇ ವೇತನ ಆಯೋಗದ ವರದಿ ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿದರು.
ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಬೈರತಿ ಬಸವರಾಜ, ಎಂಎಲ್‌ಸಿ ಕೆ.ಎಸ್.ನವೀನ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿದರು.
ಎಂಎಲ್‌ಸಿ ಚಿದಾನಂದಗೌಡ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ನೇರ‌್ಲಗುಂಟೆ ತಿಪ್ಪೇಸ್ವಾಮಿ, ಎಚ್.ಎಸ್.ಶಿವಶಂಕರ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಸೌಭಾಗ್ಯಾ ಬಸವರಾಜನ್, ರವೀಂದ್ರಪ್ಪ, ಸುರೇಶ್ ಸಿದ್ದಾಪುರ, ಜಯಪಾಲಯ್ಯ, ಎನ್.ಆರ್.ಲಕ್ಷ್ಮೀಕಾಂತ್, ಡಿ.ಗೋಪಾಲಸ್ವಾಮಿ ನಾಯಕ, ಮಲ್ಲಿಕಾರ್ಜುನ್, ಸಿದ್ದೇಶ್, ತಮ್ಮೇಶ್‌ಗೌಡ, ಜಿ.ಬಿ.ಶೇಖರ್ ಇತರರಿದ್ದರು.