ಬೀದರ್: ಹೆಣ್ಣು ಮಗುವಿನ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ, ಕಾಳಜಿ ಹೊಂದಲು ಪ್ರೇರಣೆಯಾಗುವ ಆಶಯದೊಂದಿಗೆ ನಗರದ ಕೇಂದ್ರ ಬಸ್ ನಿಲ್ದಾಣದ ಹಿಂದೆ ಜಿಲ್ಲಾಡಳಿತ ಸ್ಥಾಪಿಸಿರುವ ರಾಜ್ಯದ ಮೊದಲ ಬೇಟಿ ಸರ್ಕಲ್ ಮಂಗಳವಾರ ಅನಾವರಣಗೊಳಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಮೋದಿ ಅವರು ಮಹಿಳಾ ಪರ ಅನೇಕ ಯೋಜನೆ ರೂಪಿಸಿದ್ದಾರೆ. ಬೇಟಿ ಪಢಾವೋ ಬೇಟಿ ಬಚಾವೋ ಘೋಷವಾಕ್ಯ ಮೊಳಗಿಸಿದ್ದಾರೆ. ಹೆಣ್ಣು ಮಕ್ಕಳ ಏಳ್ಗೆ ಮತ್ತು ಅವರ ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ಧವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಸುಂದರವಾಗಿ ನಿರ್ಮಿಸಿರುವ ಬೇಟಿ ಸರ್ಕಲ್, ಹೆಣ್ಮಕ್ಕಳ ಕಾಳಜಿಗೆ ಪ್ರೇರಣೆ ನೀಡಲಿದೆ ಎಂದು ಹೇಳಿದರು.
ಡಿಸಿ ರಾಮಚಂದ್ರನ್ ಮಾತನಾಡಿ, ಅತ್ಯಂತ ಕೀಳು ಮನಸ್ಥಿತಿಯಾದ ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕಿದೆ. ಹೆಣ್ಣು ಮಗು ನಮಗೆ ಹೊರೆ ಎನ್ನುವ ದೃಷ್ಟಿಕೋನ ಬದಲಾಯಿಸಿ,ಅವರು ನಮ್ಮ ಆಸ್ತಿ ಎಂದು ಜನರಲ್ಲಿ ಮಾನಸಿಕ ಬದಲಾವಣೆ ತರುವ ನಿಟ್ಟಿನಲ್ಲಿ ಇಲ್ಲಿ ಬೇಟಿ ವೃತ್ತವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಂಸದ ಭಗವಂತ ಖೂಬಾ ಮಾತನಾಡಿದರು. ಇಬ್ಬರು ಬಾಲಕಿಯರಿಗೆ ಭಾಗ್ಯಲಕ್ಷ್ಮೀ ಬಾಂಡ್ ಸಾಂಕೇತಿಕವಾಗಿ ವಿತರಿಸಲಾಯಿತು. ವಿವಿಧ ಇಲಾಖೆಗಳು ಹಮ್ಮಿಕೊಂಡಿದ್ದ `ಹೆಣ್ಣು ಮಗುವನ್ನು ಉಳಿಸಿ-ಹೆಣ್ಣು ಮಗುವನ್ನು ಓದಿಸಿ' ರ್ಯಾಲಿಗೆ ಈ ವೇಳೆ ಸಚಿವರು ಹಸಿರು ನಿಸಾನೆ ತೋರಿಸಿದರು. ರ್ಯಾಲಿಯು ಬೇಟಿ ವೃತ್ತದಿಂದ ಆರಂಭಗೊಂಡು ಬಸ್ ನಿಲ್ದಾಣ, ಮಡಿವಾಳ ವೃತ್ತ ಮೂಲಕ ಬಾಲಭವನವರೆಗೆ ಸಂಚರಿಸಿತು.
ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಬುಡಾ ಅಧ್ಯಕ್ಷ ಬಾಬು ವಾಲಿ, ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಅಪರ ಡಿಸಿ ರುದ್ರೇಶ ಘಾಳಿ, ಎಸಿ ಗರೀಮಾ ಪನ್ವಾರ್, ಡಿಎಚ್ಒ ಡಾ.ವಿ.ಜಿ.ರೆಡ್ಡಿ, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ, ಸಿಡಿಪಿಒ ಶಂಭುಲಿಂಗ ಹಿರೇಮಠ, ಶಾಲಿನಿ ಫ್ಲಾರೆನ್ಸ್, ಗೀತಾಂಜಲಿ, ಅನೀತಾ, ಶಾರದಾ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರೆ ನಿರೂಪಣೆ ಮಾಡಿದರು.