ಸೋಮವಾರಪೇಟೆ: ರಾಜ್ಯದಲ್ಲಿ ಕಸ್ತೂರಿರಂಗನ್ ವರದಿ ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದು ರಾಜ್ಯದ ನಿರ್ಧಾರವನ್ನು ಕೇಂದ್ರ ಸರ್ಕಾರ ಪುರಸ್ಕರಿಸಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮನವಿ ಮಾಡಿದರು.
ಕಸ್ತೂರಿರಂಗನ್ ವರದಿಯಂತೆ ಕೊಡಗಿನಲ್ಲಿರುವ ಪಶ್ಚಿಮಘಟ್ಟ ಸುತ್ತಲ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಗುರುತಿಸಿದರೆ, ಕೊಡಗಿನ ಬಹುತೇಕ ಗ್ರಾಮಗಳು ವಲಯಕ್ಕೆ ಸೇರ್ಪಡೆಗೊಂಡು ಗ್ರಾಮೀಣ ಜನರು ಬೀದಿ ಪಾಲಾಗಬೇಕಾಗುತ್ತದೆ. ಪುಷ್ಪಗಿರಿ ತಪ್ಪಲಿನ ಸನಿಹವೇ ಗ್ರಾಮಗಳಿದ್ದು, ಸಿ ಆ್ಯಂಡ್ ಡಿ ಕೃಷಿ ಭೂಮಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಸಿ ಆ್ಯಂಡ್ ಡಿ ಭೂಮಿ ಸೂಕ್ಷ್ಮ ಪರಿಸರ ವಲಯಕ್ಕೆ ಸೇರ್ಪಡೆಯಾಗುತ್ತದೆ. ನಂತರ ರೈತರು ಗುಳೇ ಹೋಗಬೇಕಾದ ಅನಿವಾರ್ಯ ಒದಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯಕ್ಕೆ ಸೇರಿಸಲು ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಮೂಡಿಸಲಾಗಿದೆ. ರೈತರು ಹೋರಾಟದ ಮೂಲಕ ಭೂಮಿ ಉಳಿಸಿಕೊಳುವ ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಿ ಆ್ಯಂಡ್ ಡಿ ಭೂಮಿಯ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಲು ಕಂದಾಯ ಸಚಿವರು ಉನ್ನತಮಟ್ಟದ ಸಮಿತಿ ರಚಿಸುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದಾರೆ. ಸಮಿತಿಯಲ್ಲಿ ಕೊಡಗಿನ ಶಾಸಕರು ಹಾಗೂ ರೈತ ಮುಖಂಡರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಕೂಡಲೇ ಸಮಿತಿ ಕಾರ್ಯಾರಂಭ ಮಾಡಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಸಿ ಆ್ಯಂಡ್ ಡಿ ಭೂಮಿಯ ಜಂಟಿ ಸರ್ವೇ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಸಂಚಾಲಕರಾದ ಕೆ.ಎಂ.ಲೋಕೇಶ್ ಮಾತನಾಡಿ, ಸಿ ಆ್ಯಂಡ್ ಡಿ ಭೂಮಿ ಹಾಗೂ ರೈತರ ಸಮಸ್ಯೆ ಬಗ್ಗೆ ಕ್ಷೇತ್ರದ ಸಂಸದರು ಮತ್ತು ಉಸ್ತುವಾರಿ ಸಚಿವರು ತಿಳಿದುಕೊಳ್ಳಬೇಕು. ರೈತರ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕಾದದು ಸಂಸದರ ಕರ್ತವ್ಯವಾಗಿದೆ. ಕೂಡಲೇ ಉಸ್ತುವಾರಿ ಸಚಿವರು, ಸಂಸದರ ನೇತೃತ್ವದಲ್ಲಿ ಕೊಡಗಿನಲ್ಲಿ ರೈತ ಮುಖಂಡರ ಸಭೆಯನ್ನು ಕರೆಯಬೇಕು. ಸ್ಥಳೀಯ ಶಾಸಕರು ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ, ಸೆಕ್ಷನ್ 4 ಸರ್ವೇ ಬಗ್ಗೆ ಪೂರ್ಣ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.
ಕೊಡಗಿನ ರೈತರ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬುದು ಈಗ ಕೊಡಗಿನ ರೈತರಿಗೆ ಅರಿವಾಗುತ್ತಿದೆ. ಭೂಮಿಯನ್ನು ಕಳೆದುಕೊಂಡು ರೈತರು ಗುಳೇ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಕೊಡಗಿನ ಮೂಲನಿವಾಸಿಗಳಿಗೆ ಸರ್ಕಾರ ತೊಂದರೆ ನೀಡಿದರೆ ಮತ್ತೊಮ್ಮೆ ಕೊಡಗು ರಾಜ್ಯದ ಹೋರಾಟಕ್ಕೆ ಕರೆಕೊಡುವ ಸಂದರ್ಭವೂ ಒದಗಬಹುದು ಎಂದು ಹೇಳಿದರು.
ಸಮಿತಿ ಸಂಚಾಲಕರಾದ ಬಿ.ಜೆ.ದೀಪಕ್ ಮಾತನಾಡಿ, ಸರ್ಕಾರದ ಆದೇಶದಂತೆ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಜಮೀನುಗಳನ್ನು ಗುತ್ತಿಗೆ ನೀಡುವ ಸಂಬಂಧ ಅರ್ಜಿಗಳನ್ನು ನೀಡಲು ಕಾಲಾವಕಾಶವನ್ನು ಮುಂದಿನ 3 ತಿಂಗಳಿಗೆ ವಿಸ್ತರಿಸಬೇಕು. ಡಿ.31 ಕೊನೆಯ ದಿನವಾಗಿತ್ತು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃಷಿ ಬೆಳೆಗಳ ಕಟಾವು ನಡೆಯುತ್ತಿದ್ದು ಬಹುತೇಕ ರೈತರಿಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.
ಸಮಿತಿ ಸಂಚಾಲಕರಾದ ಎಚ್.ಕೆ.ಪೃಥ್ವಿ, ದೇವರಾಜ್ ಇದ್ದರು.