ಬಿಜೆಪಿ ಅವಧಿಯ ವರ್ಕ್ ಆರ್ಡರ್ ಬೊಕ್ಕಸಕ್ಕೆ ಹೊರೆ ಗ್ಯಾರಂಟಿ ಯೋಜನೆಗಳು ಜನರಿಗೆ ವರ ಲಕ್ಷ್ಮೀಹೆಬ್ಬಾಳ್ಕರ್ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಆಗಿಲ್ಲ. ಬಿಜೆಪಿ ಅವಧಿ ಮನಸೋಇಚ್ಛೆ ವಿವಿಧ ಇಲಾಖೆಗಳಲ್ಲಿ ವರ್ಕ್ ಆರ್ಡರ್ ಕೊಟ್ಟಿರುವುದು ಬೊಕ್ಕಸಕ್ಕೆ ಹೊರೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಹೇಳಿದರು.
ಸಚಿವೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಜಿಲ್ಲಾ ಕಚೇರಿಗೆ ಸೋಮವಾರ ಆಗಮಿಸಿದ ವೇಳೆ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ತಾಪಂ, ಜಿಪಂ ಹಾಗೂ 2028ರ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಅಭಿವೃದ್ಧೆಯೆಂದರೆ ರಸ್ತೆ, ಸೇತುವೆ ನಿರ್ಮಾಣವೊಂದೇ ಅಲ್ಲ. ಪ್ರತಿ ಕುಟುಂಬವನ್ನೂ ಆರ್ಥಿಕವಾಗಿ ಸಬಲವಾಗಿ ಮಾಡುವುದೇ ನಿಜವಾದ ಪ್ರಗತಿ ಎನ್ನುವದ ಮೂಲಕ ಗ್ಯಾರಂಟಿ ಯೋಜನೆಗಳು ಜನರಿಗೆ ವರವಾಗಿವೆ ಎಂದು ಹೇಳಿದರು.
ತಮ್ಮ ಹಗರಣಗಳು ಬಯಲಾಗುವ ಭಯದಿಂದ ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಸೂಕ್ತ ವಿಚಾರಣೆ ಮಾಡದೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.
ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಒತ್ತಡ ಹಾಕಿ ಮಧ್ಯಂತರ ವರದಿ ತರಿಸಿಕೊಂಡಿಲ್ಲ. ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರೇ ಹಗರಣದ ಕುರಿತು ಮಾತನಾಡಿದ್ದಾರೆ ಎಂದು ಹೇಳಿದರು.
ಅನೇಕ ಬಾರಿ ಸಚಿವನಾಗಿ ಕೆಲಸ ಮಾಡಿದ್ದು, ಸಿಎಂ ಆಗುವುದು ಬಾಕಿ ಇದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಅವರ ಭೇಟಿ ಸಹಜ. ಇವೆಲ್ಲಕ್ಕೂ ರಾಜಕೀಯ ಬಣ್ಣ ಬೇಡ ಎಂದು ಕೋರಿದ ಅವರು, ಅನುದಾನ ವಿಚಾರದಲ್ಲಿ ಶಾಸಕರಲ್ಲಿ ತೃಪ್ತಿ ಇದೆ ಎಂದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು, ಬೃಹತ್ ಸೇಬಿನ ಹಾರ ಹಾಕಿ, ಪುಷ್ಪವೃಷ್ಟಿ ಮೂಲಕ ಗೌರವಿಸಿದರು. ಅಂಬೇಡ್ಕರ್, ಒನಕೆ ಓಬವ್ವ ಪ್ರತಿಮೆಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಲಾರ್ಪಣೆ ಮಾಡಿದರು.
ಮಾಜಿ ಶಾಸಕರಾದ ಎ.ವಿ.ಉಮಾಪತಿ, ಜಯಮ್ಮ ಬಾಲರಾಜ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಗ್ಯಾರಂಟಿ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನಗರಸಭೆ ಅಧ್ಯಕ್ಷೆ ಸುಮಿತಾ, ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಸಿ.ನಿರಂಜನಮೂರ್ತಿ, ಹನುಮಲಿ ಷಣ್ಮುಖಪ್ಪ, ಮೋಕ್ಷಾ ರುದ್ರಸ್ವಾಮಿ, ಡಿ.ಆರ್.ಲೋಕೇಶ್ವರಪ್ಪ, ಅಂಜಿನಪ್ಪ, ಎನ್.ಡಿ.ಕುಮಾರ್, ರುದ್ರಾಣಿ ಗಂಗಾಧರ್, ಗೀತಾನಂದಿನಿಗೌಡ, ಮುನಿರಾ ಎ.ಮಕಾಂದಾರ್ ಮತ್ತಿತರರು ಇದ್ದರು.
*ಕಾರ‌್ಯಕರ್ತರ ವಾಗ್ವಾದ
ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮೀಕಾಂತ್ ಹಾಗೂ ಮಹಿಳಾ ಕಾರ‌್ಯಕರ್ತೆಯೊಬ್ಬರು, ಪಕ್ಷದ ಗೆಲುವಿಗೆ ಶ್ರಮಿಸಿರುವ ಕಾರ‌್ಯಕರ್ತರ ಕಡೆಕಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಪರಸ್ಪರ, ಗದ್ದಲ ಉಂಟಾಯಿತು. ತಕ್ಷಣ ಮಧ್ಯಪ್ರವೇಶಿಸಿದ ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಕಾರ‌್ಯಕರ್ತರ ನೋವು ಅರ್ಥವಾಗುತ್ತದೆ. ಯಾರೂ ಬೇಸರ ಮಾಡಿಕೊಳ್ಳಬಾರದು. ನಿಷ್ಠಾವಂತರನ್ನು ಪಕ್ಷ ಗುರುತಿಸಲಿದೆ ಎಂದು ಸಮಾಧಾನ ಪಡಿಸಿದರು.
*ಕಮಲ ವಿರುದ್ಧ ಪುಟಿದೇಳಿ
ನೀವಿಂದು ಅದ್ದೂರಿ ಸ್ವಾಗತ ಕೋರಿದ್ದೀರಿ. ಆದರೆ, ಇಲ್ಲಿನ ಸಣ್ಣ ಗೊಂದಲ ಮಾಧ್ಯಮದಲ್ಲಿ ದಿನವೀಡಿ ವಿಜೃಂಬಿಸುತ್ತದೆ ಎಂದು ಲಕ್ಷ್ಮೀಹೆಬ್ಬಾಳಕರ್ ಆತಂಕ ವ್ಯಕ್ತಪಡಿಸಿದರು. ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿರುವ ಸತ್ಯ ಎಲ್ಲರಿಗೂ ಗೊತ್ತಿದೆ. ಆದ್ದರಿಂದ ನೀವು ಸದಾ ಜಾಗ್ರಗತರಾಗಬೇಕು. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ ವಿರುದ್ಧ ಕಾರ‌್ಯಕರ್ತರು ಪುಟಿದೇಳಬೇಕು ಎಂದು ಕೋರಿದರು.