ಜಿಲ್ಲೆ

ರಾಜ್ಯದ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಕಾರಣ : ಎಲ್ಲ ಪಕ್ಷಗಳು ಸೇರಿದರೆ ಚರ್ಚೆಗೆ ಸಿದ್ಧ ಎಂದ ಎಚ್​ಡಿಕೆ, ವೈಯಕ್ತಿಕ ಚರ್ಚೆ ಮಾಡಲ್ಲ

ಚನ್ನಪಟ್ಟಣ: ಸಿದ್ದರಾಮಯ್ಯನವರ ಹೇಳಿಕೆ ವಿಚಾರ ಅವರಿಗೆ ಬಿಟ್ಟಿದ್ದು, ಅವರ ಬಗ್ಗೆ ವೈಯಕ್ತಿಕವಾಗಿ ನಾನೇಕೆ ಚರ್ಚೆ ಮಾಡಲಿ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ತಿಳಿಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಠಾಧೀಶರ ವಿರುದ್ಧ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ಒಂದು ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬಂದಿರೋದು ಸಿದ್ದರಾಮಯ್ಯ ಅವರಿಂದಲೇ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಬೇಕಾದರೆ ಒಂದೆಡೆ ಸೇರಲಿ ಈ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದರು.

ಬಿಜೆಪಿಯವರಿಗೆ ಇಂತಹ ವಿಚಾರಗಳೇ ಬೇಕಿದೆ. ಸಮಾಜ ಒಳ್ಳೆಯ ರೀತಿಯಲ್ಲಿರುವುದು ಅವರಿಗೆ ಬೇಕಿಲ್ಲ ಎಂದು ಕುಟುಕಿದ ಕುಮಾರಸ್ವಾಮಿ, ಇದೇ ಸಿದ್ಧರಾಮಯ್ಯ ಈ ಹಿಂದೆ ಆಹಿಂದ ಕಟ್ಟಲು ಹೋಗಿದ್ದರು. ದೇವೇಗೌಡರು ಕಟ್ಟಿದ ಪಕ್ಷದ ಉಳಿವಿಗೆ ಅಂದು ತಾತ್ಕಾಲಿಕವಾಗಿ ಹಾಗೂ ಅನಿವಾರ್ಯವಾಗಿ ಬಿಜೆಪಿ ಜತೆ ಸರ್ಕಾರ ಮಾಡಿದ್ದೆ. ಆದರೆ, ಎಂದೂ ಸಹ ಸಾಮರಸ್ಯ ಹಾಗೂ ಭಾವೈಕ್ಯತೆಗೆ ಧಕ್ಕೆ ತರಲಿಲ್ಲ. ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಿಂದಿನಿಂದ ಸಿದ್ಧರಾಮಯ್ಯ ಚಿತಾವಣೆಯಿದೆ. ಈಗ ಅನುಭವಿಸಲಿ ಎಂದು ಸಿದ್ಧರಾಮಯ್ಯಗೆ ಟಾಂಗ್​ ನೀಡಿದರು.

ಜೆಡಿಎಸ್​ ತಾಲೂಕು ಅಧ್ಯಕ್ಷ ಎಚ್​.ಸಿ. ಜಯಮುತ್ತು, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಕುಕ್ಕೂರುಡೊಡ್ಡಿ ಜಯರಾಂ, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್​ ಮುಖಂಡರಾದ ನರ್ಸರಿ ಲೋಕೇಶ್​ ಹಲವರು ಉಪಸ್ಥಿತರಿದ್ದರು.

ಭಗವದ್ಗೀತೆಗೆ ವಿರೋಧ ಮಾಡಿಲ್ಲ: ಭಗವದ್ಗೀತೆ ಬಗ್ಗೆ ನಾನು ಎಂದಿಗೂ ವಿರೋಧ ಮಾಡಿಲ್ಲ. ವಚನಾಮೃತ ಸೇರಿ ಗಾದೆಗಳು, ನಮ್ಮ ಸಂಸತಿಗಳ ಬಗ್ಗೆ ಪ್ರಚಾರ ಮಾಡಲಿ. ಜನರಿಗೆ ಹಾಗೂ ಮಕ್ಕಳಿಗೆ ಎಲ್ಲವನ್ನು ಕಲಿಸಿ. ಆದರೆ, ಈ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳು ಮಾಡಿದರೆ ನನ್ನ ವಿರೋಧವಿದೆ. ಅಧಿಕಾರ ಹಿಡಿಯಲು ಈ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದರೆ, ಯಾವ ಪುರುಷಾರ್ಥಕ್ಕೆ ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ನಾಯಕರನ್ನು ಎಚ್​ಡಿಕೆ ಕುಟುಕಿದರು.

ಕೋರ್ಟ್​ ಆದೇಶ ಎಲ್ಲರೂ ಒಪ್ಪಲೇಬೇಕು: ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಮುಕ್ತ ವಾತಾವರಣದಲ್ಲಿ ಪರೀೆ ನಡೆಯಬೆಕು. ಇದು ಸರ್ಕಾರದ ಜವಾಬ್ದಾರಿ. ಹಿಜಾಬ್​ ವಿಚಾರವಾಗಿ ಈಗಾಗಲೇ ಕೋರ್ಟ್​ ಆದೇಶ ಬಂದಿದೆ. ಅದನ್ನು ಎಲ್ಲರೂ ಒಪ್ಪಲೇಬೇಕು. ಗೊಂದಲಗಳಾದರೆ, ಸರ್ಕಾರ ಉತ್ತರ ಕೊಡಬೇಕು. ಇದು ಸರ್ಕಾರದ್ದೇ ಜವಾಬ್ದಾರಿ ಎಂದು ಕುಮಾರಸ್ವಾಮಿ ಹೇಳಿದರು.

ಪಟ್ಲದಮ್ಮ, ಬಿಸಿಲಮ್ಮ ದರ್ಶನ ಪಡೆದ ಎಚ್​ಡಿಕೆ: ತಾಲೂಕಿನ ಸುಳ್ಳೇರಿಯ ಪಟ್ಲದಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಹುಣಸನಹಳ್ಳಿ ಗ್ರಾಮದ ಬಿಸಿಲಮ್ಮ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಕುಮಾರಸ್ವಾಮಿ, ಎರಡು ಶಕ್ತಿದೇವತೆಗಳ ದರ್ಶನ ಪಡೆದರು. ಜತೆಗೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿನ ಶುಭ ಸಮಾರಂಭಗಳಲ್ಲಿ ಭಾಗಿಯಾದರು. ಇದಕ್ಕೂ ಮೊದಲು ನಗರದ ಪುಣ್ಯ ಆಸ್ಪತ್ರೆಗೆ ಭೇಟಿ ನೀಡಿ ಶನಿವಾರ ಸುಳ್ಳೇರಿ ಪಟ್ಲದಮ್ಮನ ಕೊಂಡ ಮಹೋತ್ಸವದಲ್ಲಿ ಕೊಂಡಕ್ಕೆ ಬಿದ್ದು ಗಾಯಗೊಂಡ ಅರ್ಚಕ ರಾಜು ಆರೋಗ್ಯ ವಿಚಾರಿಸಿದರು.

ಸುಳ್ಳೇರಿ ಪಟ್ಲದಮ್ಮನ ಕೊಂಡೋತ್ಸವದಲ್ಲಿ ಕೊಂಡ ಹಾಯುವಾಗ ಬಿದ್ದು ಗಾಯಗೊಂಡು ಚನ್ನಪಟ್ಟಣ ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ರಾಜು ಆರೋಗ್ಯವನ್ನು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿಚಾರಿಸಿದರು.