ಮೈಸೂರು: ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ರಾಜ್ಯದ 9 ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದು ಸೂಕ್ತವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಹೇಳಿದರು.
2022ರಲ್ಲಿ ಬಿಜೆಪಿ ಸರ್ಕಾರವು ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು ಯಾವುದೇ ಮೂಲ ಸೌಕರ್ಯ ಕಲ್ಪಿಸದೆ ಜಿಲ್ಲೆಗಳಲ್ಲಿ ಇದ್ದ ಸ್ನಾತಕೋತ್ತರ ಕೇಂದ್ರಗಳನ್ನೇ ವಿಶ್ವವಿದ್ಯಾಲಯಗಳೆಂದು ಘೋಷಿಸಿರುವುದು ಸರಿಯಲ್ಲ. ಕುಲಪತಿಗಳು, ಕುಲಸಚಿವರನ್ನು ನೇಮಕ ಮಾಡಿ ಲೂಟಿ ಹೊಡೆಯಲು ಬಿಜೆಪಿ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಂತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿಶ್ರಾಂತ ಕುಲಪತಿ ಪಠಾಣ್ ವರದಿ ಪ್ರಕಾರ ಒಂದು ವಿಶ್ವವಿದ್ಯಾಲಯದ ಐದು ವರ್ಷಗಳ ನಿರ್ವಹಣೆಗೆ 340 ಕೋಟಿ ರೂ. ಹಣ ಬೇಕಾಗುತ್ತದೆ. ಹೀಗಾಗಿ ಬಿಜೆಪಿ ಸರ್ಕಾರ ಮಾಡಿರುವ ಹೊಸ ವಿವಿಗಳ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ 3,400 ಕೋಟಿ ರೂ. ಬೇಕಾಗುತ್ತದೆ. ಇದು ದುಂದುವೆಚ್ಚ. ಹೀಗಾಗಿ ಈ ವಿವಿಗಳನ್ನು ಮುಚ್ಚುವುದು ಒಳಿತು ಎಂದರು.
ಯುಜಿಸಿ ನಿಯಮಾವಳಿ ಪ್ರಕಾರ ಒಂದು ವಿಶ್ವವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಮೀನಿರಬೇಕು. ಆದರೆ, ಈ ನಿಯಮಾವಳಿಯನ್ನೇ ಪಾಲಿಸಿಲ್ಲ. ಬದಲಿಗೆ ಈ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನಾಗಲಿ, ವಾಹನವನ್ನಾಗಲಿ ಖರೀದಿಸುವಂತಿಲ್ಲ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ.
ಈಗಾಗಲೇ ಮಾತೃ ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಬಳಸಿಕೊಂಡು ಸ್ಥಾಪಿಸುವುದು. ಯಾವುದೇ ಹೊಸ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ ಎಂದು ಬಿಜೆಪಿ ಸರ್ಕಾರ ಹೇಳಿದೆ. ಇದು ಬಿಜೆಪಿಯವರಿಗೆ ಉನ್ನತ ಶಿಕ್ಷಣದ ಬಗೆಗೆ ಇರುವ ನಿರ್ಲಕ್ಷೃವನ್ನು ತೋರಿಸುತ್ತದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಮಂತ್ರಿಗಳಾಗಿದ್ದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಡಾ.ಅಶ್ವತ್ಥ್‌ನಾರಾಯಣ ಅವರು ಉನ್ನತ ಶಿಕ್ಷಣವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ್ದಾರೆ. ಚುನಾವಣೆ ಸಮೀಪದಲ್ಲಿದ್ದಾಗ ತರಾತುರಿಯಲ್ಲಿ ಯಾರೂ ಕೇಳದಿದ್ದರೂ ಹೊಸ ವಿವಿಗಳನ್ನು ಸ್ಥಾಪಿಸಿ, ಕುಲಪತಿ ಹುದ್ದೆಗಳನ್ನು ಹರಾಜು ಹಾಕಿದರು. ಇದನ್ನು ಸರಿಪಡಿಸಲು ಸಿದ್ದರಾಮಯ್ಯ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ ಕೂಡಲೇ ಬಿಜೆಪಿಯವರಿಗೆ ತಳಮಳ ಶುರುವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ರಂಗಕರ್ಮಿ ಎನ್.ಎಸ್.ಗೋಪಿನಾಥ್, ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ಎಲ್. ಗೌಡ, ರೇವಣ್ಣ ಇದ್ದರು.