ಜಿಲ್ಲೆ

ರಾಜ್ಯದ 7 ಕೋಟಿ ಜನತೆಗೆ ಗ್ಯಾರಂಟಿ ಅನುಕೂಲ

ಕೆ.ಆರ್.ಪೇಟೆ: ರಾಜ್ಯದ ಜನತೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳು ರಾಜ್ಯದ ಸುಮಾರು 7 ಕೋಟಿ ಜನತೆಗೆ ಒಂದಲ್ಲ ಒಂದು ರೂಪದಲ್ಲಿ ಅನುಕೂಲವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಿಂಗಳಿಗೆ ಎರಡು ಬಾರಿ ಗ್ಯಾರಂಟಿ ಯೋಜನಾ ಸಮಿತಿ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.

ತಾಲೂಕಿನ ಹಲವಾರು ಮಂದಿಗೆ ಗೃಹಲಕ್ಷ್ಮಿ ಹಣವು ಡಿಬಿಟಿ ಮೂಲಕ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ದೂರು ಇದೆ. ಇದನ್ನು ಸರಿಪಡಿಸಬೇಕು. ಮನೆಯ ಯಜಮಾನತಿಯಾಗಿದ್ದವರು ಸಾಕಷ್ಟು ಮಂದಿ ಮೃತರಾಗಿದ್ದು, ಅಂತಹ ಕುಟುಂಬದ ಹೆಣ್ಣು ಮಗಳಿಗೆ ಗೃಹಲಕ್ಷ್ಮಿ ಹಣವು ಸಿಗುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷರು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪದ್ಮಮ್ಮ ಅವರಿಗೆ ಸಲಹೆ ನೀಡಿದರು.

ಗ್ಯಾರಂಟಿ ಸಮಿತಿ ಕಾರ್ಯದರ್ಶಿ ತಾಲೂಕು ಪಂಚಾಯಿತಿ ಇಒ ಸುಕ್ಷ್ಮಾ ಮಾತನಾಡಿ, ತಾಲೂಕಿನಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಪಾಲಕರು ವಿವಾಹ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಇದನ್ನು ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸೂಕ್ತ ಕ್ರಮ ವಹಿಸಬೇಕು. ಈ ಮೂಲಕ ಬಾಲ್ಯ ವಿವಾಹವನ್ನು ತಪ್ಪಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯ ವಿವಾಹ ಕುರಿತು ಕಾರ್ಯಾಗಾರ ಹಮ್ಮಿಕೊಂಡು ಪಾಲಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕೆ.ಆರ್.ಪೇಟೆಯಿಂದ ತಿರುಪತಿ ಹೋಗುತ್ತಿದ್ದ ಬಸ್ಸನ್ನು ನಿಲ್ಲಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಪುನರಾರಂಭಿಸುವಂತೆ ಕೇಳುತ್ತಿದ್ದಾರೆ. ಬಸ್ ಅನ್ನು ಏಕೆ ನಿಲ್ಲಿಸಲಾಗಿದೆ? ಎಂದು ಡಿಪೋ ಮ್ಯಾನೇಜರ್ ಉಮಾಮಹೇಶ್ವರಿ ಅವರನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಮಾಮಹೇಶ್ವರಿ ತಿರುಪತಿಗೆ ಕಳೆದ ಐದಾರು ವರ್ಷಗಳಿಂದ ನೇರವಾಗಿ ನಮ್ಮ ಡಿಪೋದಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸದರಿ ಮಾರ್ಗದಲ್ಲಿ ಶಕ್ತಿ ಯೋಜನೆ ಆರಂಭವಾದ ನಂತರ ನಷ್ಟ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ 1 ತಿಂಗಳಿನಿಂದ ಸದರಿ ಮಾರ್ಗವನ್ನು ಬಂದ್ ಮಾಡಲಾಗಿದೆ. ಅದೇ ಸಮಯಕ್ಕೆ ಬೆಂಗಳೂರಿನವರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ತಾಲೂಕು ಆಹಾರ ಇಲಾಖೆಯ ಅಧಿಕಾರಿ ವಿನೋದ್, ಜಿಲ್ಲಾ ಉದ್ಯೋಗಾಧಿಕಾರಿ ಕುಸುಮ, ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾ ಚಂದ್ರಶೇಖರ್, ಬೊಮ್ಮೇನಹಳ್ಳಿ ಲತಾ, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಹಾಫೀಜ್ ಉಲ್ಲಾ, ಯಗಚಗುಪ್ಪೆ ಶಿವಲಿಂಗಪ್ಪ, ಗ್ಯಾರಂಟಿ ವಿಷಯ ನಿರ್ವಾಹಕಿ ಚೈತ್ರ ಇತರರು ಉಪಸ್ಥಿತರಿದ್ದರು.