ಜಿಲ್ಲೆ

ರಾಜ್ಯಕ್ಕೆ ಮಾದರಿಯಾಗಿದೆ ಕೋಗಳಿ ಆಸ್ಪತ್ರೆ

ಕೊಟ್ಟೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ತ್ರಿವೇಣಿ ಕೋಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಲಸಿಕಾ ಕೇಂದ್ರ, ಹಾಲುಣಿಸುವ ಕೊಠಡಿ ಹಾಗೂ ಮಕ್ಕಳ ಆಟದ ಕೊಠಡಿ ಉದ್ಘಾಟಿಸಿದರು.

ಕೋಗಳಿ ಸರ್ಕಾರಿ ಆಸ್ಪತ್ರೆ ರಾಜ್ಯಕ್ಕೆ ಮಾದರಿಯಾಗಿದೆ. ರೋಗಿಗಳೇ ಟೋಕನ್ ಪಡೆಯುವ ವ್ಯವಸ್ಥೆ, ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳು ಚೆನ್ನಾಗಿವೆ. ಗ್ರಾಮೀಣ ಭಾಗದ ಆಸ್ಪತ್ರೆಯಲ್ಲೂ ಮಕ್ಕಳ ಆಟದ ಕೊಠಡಿ, ಮಕ್ಕಳಿಗೆ ಹಾಲುಣಿಸುವ ಕೋಣೆ ಮತ್ತು ದಿನದ 24 ಗಂಟೆಯೂ ಹೆರಿಗೆ ಮಾಡಿಸುವ ಸೌಲಭ್ಯ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಎಂ.ಗಂಗಾ ಮಾತನಾಡಿ, ನಾನು ಈ ಆಸ್ಪತ್ರೆಗೆ ವೈದ್ಯೆಯಾಗಿ ಬಂದಾಗ ಆಸ್ಪತ್ರೆ ಅನೈರ್ಮಲ್ಯದಿಂದ ಕೂಡಿತ್ತು. ಇದರಿಂದಾಗಿ ಆಸ್ಪತ್ರೆಗೆ ಕಾಯಕಲ್ಪ ನೀಡಲು ನೀಲಿನಕ್ಷೆ ಸಿದ್ಧಪಡಿಸಿದೆ. ಸಿಬ್ಬಂದಿ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಜನರು ಕೂಡ ಆಸ್ಪತ್ರೆ ಅಭಿವೃದ್ಧಿಗೆ ನೆರವಾಗಿದ್ದಾರೆ. ಈ ಕಾರಣದಿಂದ ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ಬಂದಿದೆ ಎಂದು ತಿಳಿಸಿದರು.