ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಆಮ್ ಆದ್ಮಿ ಪಕ್ಷವು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಮೊದಲ ಪಟ್ಟಿಯನ್ನು ಮಾರ್ಚ್ನಲ್ಲಿ ಬಿಡುಗಡೆ ಮಾಡಲಿದೆ. ಚುನಾವಣೆ ಹಿನ್ನೆಲೆ ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಾ. 4ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಮಿಸಲಿದ್ದಾರೆ ಎಂದು ಎಎಪಿ ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರನ್ ನೆರಬೆಂಚಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಪಟ್ಟಿ ಬಿಡುಗಡೆಯು ಕೇಜ್ರಿವಾಲ್ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆಯಲಿದ್ದು, ಅಂದಿನಿಂದಲ್ಲೇ ಚುನಾವಣೆ ಯಾತ್ರೆ ಆರಂಭವಾಗಲಿದೆ ಎಂದರು.
ಕರ್ನಾಟಕ ರಾಜ್ಯದ ಪ್ರಣಾಳಿಕೆ ಪಕ್ಷದ ಮುಖಂಡ ಭಾಸ್ಕರರಾವ್ ನೇತೃತ್ವದಲ್ಲಿ ಸಿದ್ಧಗೊಳ್ಳುತ್ತಿದ್ದು, ಈ ಪ್ರಣಾಳಿಕೆಯನ್ನು ರಾಜ್ಯ ಹಾಗೂ ಜಿಲ್ಲಾವಾರು ಮಟ್ಟಕ್ಕೆ ಅನುಗುಣವಾಗಿ ನೀಡಲಾಗುವುದು. ಇದನ್ನು ಪ್ರಣಾಳಿಕೆ ಎನ್ನುವುದಕ್ಕಿಂತ ಗ್ಯಾರಂಟಿ ಕಾರ್ಡ್ ಎಂದು ಸಹಿ ಮಾಡಿ ನೀಡಲಾಗುವುದು. ರಾಜ್ಯದ ರೈತರ, ಕಾರ್ವಿುಕರ, ಸರ್ಕಾರಿ ನೌಕರರು, ಮಹಿಳೆಯರ ಹಾಗೂ ಯುವ ಜನರಿಗೆ ಸಂಬಂಧಿಸಿದ ಅಂಶಗಳನ್ನಿಟ್ಟುಕೊಂಡು ಪ್ರಣಾಳಿಕೆಯನ್ನು ತಯಾರಿಸಲಾಗುವುದು ಎಂದರು
ಮುಖ್ಯಮಂತ್ರಿ ಚಂದ್ರು ಅವರು ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದಾರೆ. ಮುಂದಿನ ವಾರ ಹುಬ್ಬಳ್ಳಿ ಸೇರಿದಂತೆ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.
ಮುಖಂಡರಾದ ವಿಕಾಸ ಸೊಪ್ಪಿನ, ಅನಂತ ಕುಮಾರ ಬುಗಡಿ, ಪ್ರವೀಣ ನಡಕಟ್ಟಿ, ಶಶಿಕುಮಾರ ಸುಳ್ಳದ, ಮಲ್ಲಪ್ಪ ತಡಸದ, ಉಪಸ್ಥಿತರಿದ್ದರು.