ತುಮಕೂರು: ಜಿಲ್ಲೆಯ ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಪಸ್ವರಕ್ಕೆ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ, ಶಿರಾ ಶಾಸಕ ಟಿ.ಬಿ.ಜಯಚಂದ್ರ ಗರಂ ಆಗಿದ್ದಾರೆ.
ರಾಜ್ಯದಲ್ಲಿ ಎಂ.ಬಿ.ಪಾಟೀಲ್ ಮಾತ್ರ ಸಚಿವರಾಗಿಲ್ಲ, ಇನ್ನೂ ಸಾಕಷ್ಟು ಸಚಿವರಿದ್ದಾರೆ, ಶಾಸಕರೂ ಇದ್ದಾರೆ. ಅವರೆಲ್ಲರ ಅಭಿಪ್ರಾಯವೂ ಮುಖ್ಯವಾಗಿರಲಿದೆ ಎಂದು ಟಾಂಗ್ ನೀಡಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಜಯಚಂದ್ರ, ಎಂ.ಬಿ.ಪಾಟೀಲ್ ಶಿರಾಗೆ ಬಂದು ಒಮ್ಮೆ ನೋಡಲಿ. ಹೂಡಿಕೆದಾರರು ಬಂದು ನೋಡಿ ಒಪ್ಪದಿದ್ದರೆ ನೋಡೋಣ ಎಂದು ಸಾವಾಲೆಸೆದರು.
ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದರೆ ಅದು ತುಮಕೂರು ಹಾಗೂ ಚಿತ್ರದುರ್ಗಕ್ಕೆ ಮಾತ್ರ ಅನುಕೂಲವಾಗಲಿದೆ ಎಂಬ ಮಾತನ್ನು ಪದೇಪದೇ ಹೇಳುತ್ತಲೇ ಇರುತ್ತಾರೆ. ಆದರೆ, ಈ ಮಾತು ಹೇಳುವ ಅವಶ್ಯಕತೆ ಇಲ್ಲ. ಎಂ.ಬಿ.ಪಾಟೀಲ್ ಇಡೀ ಕರ್ನಾಟಕದ ಸಚಿವರಿದ್ದಾರೆ, ಅವರು ಮಾತ್ರ ಅಲ್ಲಾ ತುಂಬಾ ಜನ ಸಚಿವರಿದ್ದಾರೆ, ಶಾಸಕರಿದ್ದಾರೆ ಎಂದರು.
ಶಿರಾ ಭಾಗದಲ್ಲಿ ಮಾತ್ರ ಹೂಡಿಕೆದಾರರು ಬರೊದಿಲ್ಲ ಎಂದು ಯಾವ ಖಾತ್ರಿಯ ಮೇಲೆ ಹೇಳುತ್ತಿದ್ದಾರೆ, ಹೂಡಿಕೆದಾರರು ಬರೊದಿಲ್ಲ ಎಂದು ರಾಜ್ಯದ ಸಚಿವರೇ ತೀರ್ಮಾನಕ್ಕೆ ಬಂದರೆ ಏನು ಅರ್ಥ ಎಂದು ಅಸಮಧಾನ ಹೊರಹಾಕಿದರು.