ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ರೈಲ್ವೆ ಸೇವೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ 47 ಸಾವಿರ ಕೋಟಿ ರೂ.ಗಳನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅಮೃತ ಭಾರತ ಸ್ಟೇಶನ್ ಯೋಜನೆಯಡಿ 17 ಕೋಟಿ ರೂ. ವೆಚ್ಚದಲ್ಲಿ ಅಳ್ನಾವರ ತಾಲೂಕು ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಸಂಚರಿಸುವ ರೈಲ್ವೆ ಸೌಲಭ್ಯವನ್ನು ಉನ್ನತ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೆ ಉನ್ನತೀಕರಿಸಲಾಗುತ್ತಿದೆ ಎಂದರು.
ಹಿಂದಿನ ಸರ್ಕಾರ ರೈಲ್ವೆ ಅಭಿವೃದ್ಧಿಗೆ ಮುತುವರ್ಜಿ ವಹಿಸಿರಲಿಲ್ಲ. 60 ವರ್ಷಗಳಲ್ಲಿ ಬರೀ 20 ಸಾವಿರ ಕಿ.ಮೀ. ವಿದ್ಯುದ್ದೀಕರಣ ಮಾಡಲಾಗಿತ್ತು. ಆದರೆ ನಾವು 9 ವರ್ಷಗಳಲ್ಲಿ 37ಸಾವಿರ ಕಿ.ಮೀ. ವಿದ್ಯುದ್ದೀಕರಣ ಮಾಡಿದ್ದಲ್ಲದೆ,
ಡಬ್ಲಿಂಗ್ ಕಾರ್ಯವನ್ನೂ ವೇಗವಾಗಿ ನಡೆಸುತ್ತಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿ ರೈಲು ನಿಲ್ದಾಣಗಳ ಉನ್ನತೀಕರಣದ ಜತೆಗೆ ಅವುಗಳನ್ನು ವಿಶ್ವ ದರ್ಜೆಗೆ ಏರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಒಂದೇ ಬಾರಿಗೆ ದೇಶದ 508 ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಇನ್ನೂ ಸಾಕಷ್ಟು ನಿಲ್ದಾಣಗಳ ಅಭಿವೃದ್ಧಿ ಬಾಕಿ ಇದ್ದು, ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಳ್ನಾವರ ರೈಲು ನಿಲ್ದಾಣ ಅಭಿವೃದ್ಧಿ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಹೊಸತನದ ಕಲ್ಪನೆಯ ಯೋಜನೆ ಹಿಂದಿನ ಸರ್ಕಾರಗಳಲ್ಲಿ ಆಗಲಿಲ್ಲ. ಮೊದಲು ರೈಲ್ವೆಗಳ ನಿರ್ವಹಣೆ ಸರಿಯಾಗಿ ಆಗುತ್ತಿರಲಿಲ್ಲ. ಮೋದಿ ಬಂದ ಮೇಲೆ ನಿರ್ವಹಣೆಗೆ ವೇಗ ಬಂದಿದೆ. ವಿವಿಧ ರೀತಿಯಲ್ಲಿ ಅಭಿವೃದ್ಧಿ ಆಗುತ್ತಿದೆ. ಇದರ ಗುಣಮಟ್ಟ ಕಾಪಾಡಲು ಬಹಳಷ್ಟು ಕೆಲಸ ಮಾಡುತ್ತಿದ್ದೇವೆ ಎಂದರು.
ಕೆ.ಎಚ್. ಮುನಿಯಪ್ಪ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ 900 ಕೋಟಿ ರೂ.ಗಳನ್ನು ರಾಜ್ಯದ ರೈಲ್ವೆ ಅಭಿವೃದ್ಧಿಗೆ ನೀಡಿದ್ದನ್ನೇ ದೊಡ್ಡ ಸಾಧನೆ ಎನ್ನುವಂತೆ ಹೇಳಿದ್ದರು. ಆದರೆ, ಕಳೆದ ವರ್ಷದ ಒಂದೇ ಬಜೆಟ್‌ನಲ್ಲಿ ಪ್ರಧಾನಿ ಮೋದಿ ಅವರು 7561 ಕೋಟಿ ರೂ. ರಾಜ್ಯಕ್ಕೆ ನೀಡಿದ್ದಾರೆ. ರೈಲ್ವೆ ಕ್ರಾಸಿಂಗ್‌ಗಳ ಮೇಲ್ಸೇತುವೆ ಕಾರ್ಯ ನಡೆದಿದೆ. ವಂದೆ ಭಾರತ ರೈಲು ಧಾರವಾಡದಿಂದ ಶುರುವಾಗಿದೆ. ಧಾರವಾಡ- ಬೆಂಗಳೂರು ಡಬ್ಲಿಂಗ್ ಕಾರ್ಯ ಮುಗಿದಿದೆ. ವಿದ್ಯುತ್ ಲೈನ್ ಅಳವಡಿಕೆಯೂ ಪೂರ್ಣ ಆಗಿದೆ. ಇದು ಬಿಜೆಪಿಯ ಅಭಿವೃದ್ಧಿ ಸಾಧನವಾಗಿದೆ ಎಂದರು.
ನೈರುತ್ಯ ರೈಲ್ವೆ ಮ್ಯಾನೇಜರ್ ಸಂಜೀವ ಕಿಶೋರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಡಿವಿಜನಲ್ ಮ್ಯಾನೇಜರ್ ಹರ್ಷ ಖಾರೆ, ಭರತಕುಮಾರ ಜೈನ್, ನಾರಾಯಣ ಮೋರೆ, ಇತರರು ಇದ್ದರು.