ಚಿಕ್ಕನಾಯಕನಹಳ್ಳಿ : ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಗೆ ಅಭಿನಂದನೆ ಹಾಗೂ 150 ಮಂದಿ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎನ್‌ಪಿಎಸ್ ಯೋಜನೆ ರದ್ದುಗೊಳಿಸಿ ಒಪಿಎಸ್ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿನ 15ಸಾವಿರ ಡಯಾಲಿಸಿಸ್‌ನಿಂದ ನರಳುತ್ತಿದ್ದ ನೌಕರರಿಗೆ ಹಾಗೂ ಕ್ಯಾನ್ಸರ್‌ನಿಂದ ಬಳಲುವ ನೌಕರರಿಗೆ ಚಿಕಿತ್ಸೆಗೆ ಅನುಕೂಲವಾಗಲು ಗರಿಷ್ಠ 6 ತಿಂಗಳ ವೇತನ ಸಹಿತ ರಜೆ ಮಂಜೂರು ಮಾಡಲು ಆದೇಶ ಮಾಡಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಒಂದು ಲಕ್ಷದಿಂದ ಐದು ಲಕ್ಷ ರೂಪಾಯಿವರೆಗೆ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ನೌಕರರ ಅವಲಂಬಿತ ಕುಟುಂಬದವರಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು ಎಂಬ ಮನವಿಯನ್ನು ಸರ್ಕಾರದ ಮುಂದಿಟ್ಟಿದ್ದು, ಮುಂದಿನ ಬಜೆಟ್‌ನಲ್ಲಿ ಸರ್ಕಾರಿ ನೌಕರರು ಸ್ವಾಭಿಮಾನದಿಂದ ಬದುಕಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಸರ್ಕಾರಿ ನೌಕರರ ಮೇಲೆ ಆಧಾರ ರಹಿತ ದೂರು ಸುಳ್ಳುದೂರುಗಳಿಗೆ ಯಾವುದೇ ಮನ್ನಣೆ ನೀಡದೇ ಅಂತಹ ದೂರುಗಳನ್ನು ತಳ್ಳಿಹಾಕುವಂತೆ ಆದೇಶವನ್ನು ಮಾಡಿಸಲಾಗಿದೆ. ಇದರೊಂದಿಗೆ ಕೆಜಿಐಡಿಯಲ್ಲಿ ಸಾಲ ಪಡೆಯಲು ಇರುವ ತೊಡಕುಗಳನ್ನು ಸರಿಪಡಿಸಿ ಪ್ರತಿತಿಂಗಳು ಪ್ರತಿಯೊಬ್ಬ ನೌಕರರ ಕೆಜಿಐಡಿ ಮಾಹಿತಿ ಹಾಗೂ ಮೊಬೈಲ್ ಆ್ಯಪ್ ಮೂಲಕವೇ ಸಾಲ ಪಡೆಯುವ ವಿಧಾನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಿಶ್ವನಾಥ್, ಶಿಕ್ಷಕರಾದವರು ಮಕ್ಕಳಲ್ಲಿ ಮಗುವಾಗಿ ಕಲಿಸಬೇಕು, ಮಕ್ಕಳಲ್ಲಿ ಭಯ ಹಾಗೂ ಅರಿವು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪೂರ್ವ ತಯಾರಿ ಅಗತ್ಯವಾಗಿ ಮಾಡಬೇಕು ಎಂದರು.
ಜಿಲ್ಲಾ ಗೌರವ ಅಧ್ಯಕ್ಷ ಗಿರಿಗೌಡ, ಜಿಲ್ಲಾ ಅಧ್ಯಕ್ಷ ನರಸಿಂಹರಾಜು, ಉಪಾದ್ಯಕ್ಷ ಹರ್ಷ, ಕಾರ್ಯದರ್ಶಿ ಸದಾನಂದ್, ತಹಸೀಲ್ದಾರ್ ಬಿ.ತೇಜಸ್ವೀನಿ, ಶಿಕ್ಷಣ ಇಲಾಖೆಯ ಅಧಿಕಾರಿ ಸಿ.ನಂಜಯ್ಯ, ಡಯಟ್‌ನ ಪ್ರಾಂಶುಪಾಲ ಮಂಜುನಾಥ್, ಪುರಸಭಾಧ್ಯಕ್ಷೆ ಪುಷ್ಪಾ, ಸಂಘದ ತಾಲೂಕು ಉಪಾಧ್ಯಕ್ಷ ನಿರೂಪ್ ರಾವತ್ , ರಾಜಯ್ಯ, ಪಲ್ಲಕ್ಕಿಬಸವರಾಜು ಇದ್ದರು.
ಸಮುದಾಯ ಭವನ ನಿರ್ಮಾಣಕ್ಕೆ ಸ್ಪಂದನೆ : ತಾಲೂಕಿನಲ್ಲಿ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಿಸಲು ಸಚಿವರಿಗೆ ಮನವಿ ನೀಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯ ಸಂಘದಿಂದ 1 ಕೋಟಿ ರೂ. ಅನುದಾನ ನೀಡುವಂತೆ ಕೋರಿದೆ. ಕೇಂದ್ರೀಯ ಮಾದರಿಯಲ್ಲಿ ನೌಕರರಿಗೆ ಸಂಬಳ ನೀಡುವಂತೆ ಹಾಗೂ ಹೊಸ ಪಿಂಚಣಿ ಯೊಜನೆ ರದ್ದುಪಡಿಸಿ ಹಳೆ ಮಾದರಿಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಸಂಘದ ಅಧ್ಯಕ್ಷರಿಗೆ ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಆರ್.ಪರಶಿವಮೂರ್ತಿ ಮನವಿ ಸಲ್ಲಿಸಿದರು.
ನಿವೇಶನ ಗುರುತಿಸಿ : ನಿವೃತ್ತ ಸರ್ಕಾರಿ ನೌಕರರ ಮುಂದಿನ ಜೀವನ ಸುಖಕರವಾಗಿರಲಿ, ತಾಲೂಕಿನಲ್ಲಿ ಸರ್ಕಾರಿ ನೌಕರರ ಸಮುದಾಯ ಭವನಕ್ಕೆ ಜಾಗ ಗುರುತಿಸಿ ತಿಳಿಸಿದರೆ ಆ ನಿವೇಶನ ಮಂಜೂರಿಗೆ ಪ್ರಯತ್ನಿಸುತ್ತೇನೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಿಮ್ಮ ಬೇಡಿಕೆಯಾದ ಎನ್‌ಪಿಎಸ್ ಹಾಗೂ ಒಪಿಎಸ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.